ಜಿಲ್ಲೆ

ಬೇಡಿದ್ದು ಕರುಣಿಸುವ ವರದರಾಜಸ್ವಾಮಿ

ಹಾದನೂರು ಚಂದ್ರ ಸರಗೂರು

ತಾಲೂಕಿನ ಹಾದನೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯ ಹಲವು ವಿಶೇಷಗಳಿಗೆ ಹೆಸರುವಾಸಿಯಾಗಿದೆ.

ಜಮೀನಲ್ಲಿ ಬೆಳೆ ಬೆಳೆಯುವ ಮೊದಲು ಹಾಗೂ ಒಳ್ಳೆಯ ಕಾರ್ಯಕ್ಕೆ ಮೊದಲು ವರದರಾಜಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಮಾಡುವುದು ಸುತ್ತಮುತ್ತಲ ಗ್ರಾಮದವರ ವಾಡಿಕೆ. ದೇವರಿಗೆ ಪೂಜೆ ಸಲ್ಲಿಸಿ ಕಾರ್ಯ ಮಾಡಿದರೆ ಕಾರ್ಯ ಸಾಧನೆಯಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.

ಶತಮಾನಗಳ ಇತಿಹಾಸ ಇರುವ ಈ ದೇವಾಲಯಕ್ಕೆ 2002ರಲ್ಲಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೋಟೆ ಎಂ.ಶಿವಣ್ಣ ಅವರು ವಿಶೇಷ ಕಾಳಜಿ ವಹಿಸಿ 10 ಲಕ್ಷ ರೂ. ಅನುದಾನದಲ್ಲಿ ಕಾಯಕಲ್ಪ ಒದಗಿಸಿದ್ದರು.

ಇತಿಹಾಸ: ದ್ವಾಪರ ಯುಗದಿಂದಲೂ ಹಾದನೂರಿನಲ್ಲಿ ಶ್ರೀ ವರದರಾಜಸ್ವಾಮಿ ದೇವಸ್ಥಾನ ಇತ್ತೆಂದು ತಾಲೂಕು ಗೆಜೆಟಿಯರ್‌ನಲ್ಲಿ ಉಲ್ಲೇಖವಾಗಿದೆ. ಪಾಂಡವರು ವನವಾಸದಿಂದ ಹಿಂದಿರುಗುವಾಗ ಹಾದನೂರು ಗ್ರಾಮ ಮಾರ್ಗವಾಗಿ ಬಂದು ವರದರಾಜಸ್ವಾಮಿ ದೇಗುಲದಲ್ಲಿ ತಂಗಿ. ವಿಶ್ರಾಂತಿ ಪಡೆದಿದ್ದರು ಎಂಬ ಪುರಾಣ ಕಥೆ ಇದೆ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಪುನ್ನಾಟದ ಅರಸರು, ತಲಕಾಡಿನ ಗಂಗರು, ರಾಷ್ಟ್ರಕೂಟರು, ಬಯಲುನಾಡಿನ ಕದಂಬರು, ಚೋಳರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿದ ಪ್ರಾಂತ್ಯ ಇದಾಗಿದ್ದು, ಅವರಿಂದ ನಿಯೋಜಿಸಲಟ್ಟ ಪಾಳೇಗಾರರು ಆಡಳಿತ ನಡೆಸುತ್ತಿದರು ಎಂಬ ಹಿನ್ನೆಲೆಯನ್ನು ಗ್ರಾಮ ಹೊಂದಿದೆ. ವಿಶಿಷ್ಟಾದ್ವೈತ ಸಿದ್ದಾಂತ ಪ್ರವರ್ತಕರಾದ ಶ್ರೀ ರಾಮಾನುಜಾಚಾರ್ಯರು ಚೋಳರಾಜನ ಉಪದ್ರವಕ್ಕೆ ಒಳಗಾಗಿ, ಕನ್ನಡ ನಾಡಿಗೆ ವಲಸೆ ಬಂದಾಗ ತಮ್ಮ ಇಷ್ಟ ದೈವವಾದ ವರದರಾಜಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದರು. ಪೂಜಾ ಕೈಂಕರ್ಯಕ್ಕೆ ವೈಷ್ಣವ ಸಮುದಾಯದವರನ್ನು ನೇಮಿಸಿದರು ಎಂಬುದು ಗ್ರಾಮದ ಇತಿಹಾಸ ಹೇಳುತ್ತದೆ.

ದಸರಾ ಮಾದರಿಯಲ್ಲಿ ಧಾರ್ಮಿಕ ಕಾರ್ಯ; ಮೈಸೂರು ದಸರಾ ವೇಳೆ ಅದೇ ಮಾದರಿಯಲ್ಲಿ 11ದಿನಗಳ ಕಾಲ ದೇಗುಲದಲ್ಲಿ ಪ್ರತಿ ದಿನವೂ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹೋಮ ಹವನ ಮಹಾಮಂಗಳಾರತಿ, ಗಜವಾಹನದಲ್ಲಿ ಉತ್ಸವ ಉಯ್ಯಲೋತ್ಸವ ಮಹಾಭಿಷೇಕ ನಡೆಯುತ್ತಿದೆ. ಮೆರವಣಿಗೆ ಹೊರಡುವ ಮುನ್ನ ರಕ್ಷೆ ಕೊಡುವ ಸಂಪ್ರದಾಯ ಮೈಸೂರು ಮಹಾರಾಜರ ಕಾಲದಿಂದಲೂ ನಡೆದು ಬಂದಿದೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.

ಪೂಜಾ ಕೈಂಕರ್ಯ: ದೇಗುಲ ಅಡಳಿತ ಮಂಡಳಿ ಗ್ರಾಮಸ್ಥರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಅಮಾವಾಸ್ಯೆ ಹುಣ್ಣಿಮೆ ಮತ್ತು ಹಬ್ಬ ಹರಿದಿನಗಳಂದು ವಿಶೇಷ ಅಲಂಕಾರದೊಂದಿಗೆ ಪೂಜಾ ಕಾರ್ಯ ನೆರವೇರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಸುಮಾರು 250ವರ್ಷಗಳಿಂದ ನಿಂತು ಹೋಗಿದ್ದ ಬ್ರಹ್ಮ ರಥೋತ್ಸವವನ್ನು 8ವರ್ಷಗಳಿಂದ ಮತ್ತೆ ನಡೆಸಿಕೊಂಡು ಬರಲಾಗುತ್ತಿದೆ. ದಸರಾ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದು, ದೇಗುಲ ತನ್ನ ಪರಂಪರೆಯನ್ನು ಜೀವಂತವಾಗಿ ರೂಪಿಸಿಕೊಂಡಿದೆ ಎಂದು ಗ್ರಾಮದ ಹಿರಿಯರು ತಿಳಿಸುತ್ತಾರೆ.

ನ್ಯಾಯಪಂಚಾಯಿತಿ

ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಯಾರೇ ತಪ್ಪು ಮಾಡಿದರೂ ಈ ದೇವಸ್ಥಾನದ ದೇವರ ಮುಂಭಾಗದಲ್ಲಿ ಸುಳ್ಳು ಹೇಳಲ್ಲ ಎಂಬ ನಂಬಿಕೆ ಈ ದೇವಾಲಯದಲ್ಲಿ ಇದೆ. ರಾಜಕೀಯ ನಾಯಕರು ಚುನಾವಣಾ ಸಂದರ್ಭದಲ್ಲಿ ಗ್ರಾಮಸ್ಥರು ಎಲ್ಲ ಜನರನ್ನು ಒಗ್ಗೂಡಿಸಿಕೊಂಡು ದೇವಸ್ಥಾನದ ಎದುರುಗಡೆ ಮಾತು ಕೊಟ್ಟರೆ ಅದು ಈಡೇರುತ್ತದೆ ಎಂಬ ನಂಬಿಕೆ ಇದೆ.

ಹಾದನೂರು, ಬಡಗಲಪುರ, ವಡೆಯನಪುರ, ಯಶವಂತಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ದೇವಾಲಯಕ್ಕೆ ಬರುತ್ತಾರೆ. ಎಂತಹ ಸಮಸ್ಯೆಯನ್ನೂ ಬಗೆಹರಿಸಯವ ಶಕ್ತಿ ದೇವತೆ ಎಂಬ ನಂಬಿಕೆ ಜನರಲ್ಲಿದೆ. ಬೇಡಿದ್ದು ಈಡೇರಿದರೆ ಭಕ್ತರು ಹರಕೆ ಕಾಣಿಕೆ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.

ದೇಗುಲದಲ್ಲಿ ಮದುವೆ ಸಮಾರಂಭಗಳನ್ನು ನೆರವೇರಿಸಲಾಗುತ್ತದೆ. ಸಮಸ್ಯೆಯನ್ನು ನೆನಪಿಸಿಕೊಂಡು ದೇಗುಲ ಆವರಣದಲ್ಲಿ ಮಲಗಿದರೆ ಬೆಳಗಾಗುವುದರೊಳಗೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ಮಕ್ಕಳ ಭಾಗ್ಯಕ್ಕೆ ಪ್ರಾರ್ಥಿಸಿದರೆ ಮಕ್ಕಳ ಫಲ ಕರುಣಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.