ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಇತ್ತೀಚಿಗೆ ಭಗವಾನ ಬಲರಾಮ ಜಯಂತಿ ಆಚರಿಸಲಾಯಿತು.
ಸಂಘದ ಉತ್ತರ ಪ್ರಾಂತದ ಅಧ್ಯಕ್ಷ ವಿವೇಕ ಮೋರೆ ಮಾತನಾಡಿ, ಶ್ರೀಕೃಷ್ಣ ಗೋಪಾಲಕನಾದರೆ ಕೃಷಿ ಆಯುಧ ರಂಟೆ ಹೊತ್ತ ಭಗವಾನ ಬಲರಾಮ ಕೃಷಿಕರ ಪಾಲಿಗೆ ಒಡೆಯನಾಗಿದ್ದನು ಎನ್ನುವುದು ಪುರಾಣಗಳಿಂದ ತಿಳಿದುಬರುತ್ತದೆ. ಹೀಗಾಗಿ ಕಿಸಾನ ಸಂಘಟನೆ ವತಿಯಿಂದ ಭಗವಾನ್ ಬಲರಾಮ ಜಯಂತಿ ಆಚರಿಸುವ ಪರಂಪರೆ ಬೆಳೆದುಬಂದಿದೆ ಎಂದರು.
ಬೆಳೆಹಾನಿ ನೆಪದಲ್ಲಿ ಸರ್ಕಾರ ನೀಡುವ ಪರಿಹಾರ ರೈತರ ಪಾಲಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಅದಕ್ಕೂ ರೈತರ ಅಲೆದಾಟ ತಪ್ಪಿಲ್ಲ ಎಂದರು.
ಎನ್.ಕೆ. ಕುಲಕರ್ಣಿ ಮಾತನಾಡಿ, ರೈತರು ದೇಸಿಯ ಗೋಸಂತತಿಯನ್ನು ಉಳಿಸಿ, ಬೆಳೆಸಬೇಕು.
ಸಾವಯವ ಆಧಾರಿತ ಕೃಷಿ ಪದ್ಧತಿಗೆ ಮನ್ನಣೆ ನೀಡಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಉತ್ತಮ ಗುಣಮಟ್ಟದ ಫಸಲು ಬೆಳೆದಾಗ ಮಾತ್ರ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದರು.
ಸಂಘದ ತಾಲೂಕು ಕಾರ್ಯದರ್ಶಿ ರಮೇಶ ಕೋಳಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ವಿ.ಪಿ. ಮಠಪತಿ, ರಾಮನಗೌಡ ಪಾಟೀಲ, ಚೆನ್ನಪ್ಪ ನಿಡವಣಿ, ವೀರೇಶ ಶಿವಸಿಂಪಿ, ಈಶ್ವರ ಬಟ್ಟೂರ, ಮಹಾದೇವಪ್ಪ ಗದಗ, ಮುತ್ತು ಕುಂಡಿ, ಮಲ್ಲಪ್ಪ ಕದಂಪೂರ ಇತರರಿದ್ದರು.