ಜಿಲ್ಲೆ

ಅಹಿಂಸಾ ಮಾರ್ಗ ಎಲ್ಲರ ಬದುಕಿನ ದಾರಿದೀಪ...

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯ

ಭಗವಾನ್​ ಮಹಾವೀರ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಗವಾನ್​ ಮಹಾವೀರರ ಮುಖ್ಯ ತತ್ತ್ವವಾಗಿರುವ ಅಹಿಂಸಾ ಮಾರ್ಗವನ್ನು ಎಲ್ಲರೂ ಅನುಸರಿಸುವಂತಾಗಬೇಕು. ಅವರ ಚಿಂತನೆ ಇಂದಿನ ಕಾಲಘಟ್ಟಕ್ಕೆ ಅತಿ ಅವಶ್ಯಕವೂ ಆಗಿದ್ದು, ಎಲ್ಲರ ಬದುಕಿನ ದಾರಿದೀಪವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಮಿಲನ ಉಡುಪಿ ಜಿಲ್ಲೆ ಆಶ್ರಯದಲ್ಲಿ ಏ.10ರಂದು ಆಯೋಜಿಸಿದ್ದ ಭಗವಾನ್​ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಂಚ ತತ್ತ್ವ ಬೋಧನೆ

ಮಂಗಳೂರಿನ ಪ್ರೊ. ವೃಷಭರಾಜ ಜೈನ ಉಪನ್ಯಾಸ ನೀಡಿ, ಸಾಮಾನ್ಯ ಜೀವನ ತೊರೆದು ಆಧ್ಯಾತ್ಮಿಕ ಕ್ರಮ ಅಳವಡಿಸಿಕೊಂಡ ಮಹಾವೀರರು ಅಹಿಂಸೆಯೇ ಪರಮ ಧರ್ಮ ಎಂಬುದನ್ನು ನಂಬಿದ್ದರು. ಅದನ್ನೇ ವಿಶ್ವಕ್ಕೆ ತಿಳಿಸಿದರು. ಅವರ 5 ತತ್ತ್ವಗಳಾದ ಅಹಿಂಸೆ, ಸತ್ಯ, ಆಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ಉತ್ತಮ ಜೀವನ ನಿಮಾರ್ಣವಾಗಲು ಸಾಧ್ಯ ಎಂದು ಮನದಟ್ಟು ಮಾಡಿದ್ದಾರೆ ಎಂದರು.

ಜಿಲ್ಲಾ ಜೈನ ಮಿಲನ್​ನ ಅಧ್ಯಕ್ಷ ಡಾ.ನಿತಿನ್​ ಪಾಟೇಲ, ಕಾರ್ಯಾಧ್ಯಕ್ಷ ಪ್ರಸನ್ನಕುಮಾರ, ಜೈನ ಮಿಲನ್​ನ ಪದಾಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ವರ್ಷಾ ಬಿ. ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು. ಜೈನ ಮಿಲನ್​ನ ಕಾರ್ಯದರ್ಶಿ ಡಾ. ನಿತಿನ್​ಕುಮಾರ ವಂದಿಸಿದರು.

ಪ್ರಸ್ತುತ ಸಮಯದಲ್ಲಿ ಸಮಾಜದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚತೊಡಗಿದೆ. ಯುವ ಸಮುದಾಯವೂ ಹಿಂಸೆಯಲ್ಲಿ ತೊಡಗುತ್ತಿರುವುದು ಆತಂಕಕಾರಿ ವಿಚಾರ. ಹೀಗಾಗಿ ಮಹಾವೀರರ ಅಹಿಂಸಾ ತತ್ತ್ವಗಳನ್ನು ಇನ್ನಷ್ಟು ಪ್ರಚಾರಗೊಳಿಸಬೇಕಿದೆ. ಈ ಮಾರ್ಗದಿಂದ ಮಾತ್ರ ಜನರು ಶಾಂತಿಯುತ ಜೀವನ ನಡೆಸಲು ಸಾಧ್ಯ. | ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ