ಮಡಿಕೇರಿ: ಸಮಾಜದಲ್ಲಿ ಎಲ್ಲರೂ ಬದುಕಬೇಕು, ಹಾಗೆಯೇ ಇತರರನ್ನೂ ಬದುಕಲು ಬಿಡಬೇಕು ಎಂಬುದು ಭಗವಾನ್ ಮಹಾವೀರರ ಸಂದೇಶವಾಗಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರಾಗಿದ್ದು, ಸನ್ಮತಿ, ವರ್ಧಮಾನ ಹಾಗೂ ವೀರ ಹೆಸರುಗಳಿಂದ ಮಹಾವೀರರನ್ನು ಕರೆಯುತ್ತಾರೆ. ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ್ ಮತ್ತು ಬ್ರಹ್ಮಚರ್ಯ ಈ ಪಂಚ ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು ಎಂದು ವಿವರಿಸಿದರು.
ಅಹಿಂಸೆಯೇ ಪರಮ ಧರ್ಮ ಎಂಬುದು ದಿವ್ಯ ಮಂತ್ರವಾಗಿ ಅಳವಡಿಸಿಕೊಂಡಿದ್ದ ಮಹಾವೀರರು ಅದರಂತೆ ನಡೆದುಕೊಂಡರು ಎಂದ ಅವರು, ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸೋದಿಲ್ಲ ಎಂಬ ಬಗ್ಗೆ ಭಗವಾನ್ ಮಹಾವೀರರು ಒತ್ತಿ ಹೇಳಿದ್ದರು ಎಂದು ನುಡಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಪುಣ್ಯ ಭೂಮಿಯಲ್ಲಿ ಕಾಲದಿಂದ ಕಾಲಕ್ಕೆ ಅನೇಕ ಪುಣ್ಯರನ್ನು ಕಂಡ ಶ್ರೇಷ್ಠತೆ ಹೊಂದಿದೆ. ಇಂತಹ ನಾಡಿನಲ್ಲಿ ಆಗಿ ಹೋಗಿರುವ ಋಷಿ ಮುನಿಗಳು, ಶರಣರು, ಸಂತರು ಹಾಗೂ ಮಹನೀಯರ ಸಂದೇಶಗಳನ್ನು ಪಾಲನೆ ಮಾಡುವ ಮೂಲಕ ನಾಡನ್ನು ಇನ್ನಷ್ಟು ಪುಣ್ಯಮಯ ಗೊಳಿಸಬೇಕೆಂದು ಹೇಳಿದರು.
ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ, ಮನುಷ್ಯರ ಜೀವನ ಉತ್ತಮವಾಗಲು ರತ್ನಾತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರೊತ್ರ್ಯಗಳನ್ನು ಪಾಲಿಸಬೇಕು ಎಂದಿದ್ದರು ಎಂದು ನುಡಿದರು.
ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ, ಪ್ರಮುಖರಾದ ಎಚ್.ಎಲ್.ದಿವಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಪ್ರಮುಖರಾದ ಬಿ.ಸಿ.ಶಂಕರಯ್ಯ, ಮಣಜೂರು ಮಂಜುನಾಥ್ ಇತರರಿದ್ದರು.