ಜಿಲ್ಲೆ

ನಗರದೆಲ್ಲೆಡೆ ಶ್ರೀಕೃಷ್ಣ ಸ್ಮರಣೆ: ಸಡಗರದಿಂದ ಜನ್ಮಾಷ್ಟಮಿ ಆಚರಣೆ

ಮೈಸೂರು: ನಗರದ ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಸಡಗರದಿಂದ ಆಚರಿಸಲಾಯಿತು.


ವಿವಿಧ ದೇವಸ್ಥಾನಗಳಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಯನಗರದ ಇಸ್ಕಾನ್ ದೇವಾಲಯ, ಬೋಗಾದಿಯ ಹರೇ ಕೃಷ್ಣ ದೇವಾಲಯ, ಅರಮನೆ ಆವರಣದಲ್ಲಿರುವ ಗೋಪಾಲಸ್ವಾಮಿ ದೇವಾಲಯ, ಶಿವರಾಮಪೇಟೆಯ ಕೃಷ್ಣ ದೇವಾಲಯ ಸೇರಿದಂತೆ ಇತರ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಆರಾಧಿಸಲಾಯಿತು.


ಇಸ್ಕಾನ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನೆರವೇರಿತು. ದಿನವಿಡೀ ಕೃಷ್ಣನ ಸ್ಮರಣೆ ಮಾಡಲಾಯಿತು. ಇಲ್ಲಿರುವ ಪ್ರಧಾನ ಮೂರ್ತಿಯಾದ ಶ್ರೀಕೃಷ್ಣ, ಬಾಲರಾಮ ದೇವರಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು. ಹಬ್ಬದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿವರೆಗೂ ವಿವಿಧ ಕಲಾವಿದರು ಸಂಗೀತ ಸೇವೆಯನ್ನು ಅರ್ಪಿಸಿದರು. ರಾತ್ರಿ 10ಕ್ಕೆ ಮಹಾಭಿಷೇಕ ನೆರವೇರಿತು. ಕೃಷ್ಣನ ಜನ್ಮದ ಸಮಯದಲ್ಲಿ ಮಹಾಮಂಗಳಾರತಿ, ಸಂಗೀತ ಕೀರ್ತನೆ ನಡೆಯಿತು.


ಬೆಳಗ್ಗೆಯಿಂದಲೇ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದರು. ರಾತ್ರಿವರೆಗೂ ಭಕ್ತರ ಸಂಖ್ಯೆ ಕಡಿಮೆಯಾಗಲಿಲ್ಲ. ಜನದಟ್ಟಣೆ ಹೆಚ್ಚಾಗಿದ್ದರಿಂದ ದೇವಸ್ಥಾನದ ಎದುರು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ರಸ್ತೆ ಬದಿಯಲ್ಲೇ ಅಡ್ಡಾದಿಡ್ಡಿಯಾಗಿ ಕಾರ್, ಬೈಕ್‌ಗಳನ್ನು ನಿಲ್ಲಿಸಿದ್ದರಿಂದ ಈ ಸಮಸ್ಯೆ ಉಂಟಾಯಿತು.


ದಟ್ಟಗಳ್ಳಿಯ ವಿಶ್ವಪ್ರಜ್ಞ ಶಾಲೆಯಲ್ಲಿ ಮಕ್ಕಳು ಕೃಷ್ಣ ಮತ್ತು ರಾಧೆಯರ ವೇಷಭೂಷಣದಲ್ಲಿ ಕಂಗೊಳಿಸಿದರು. ಪೂಜೆ, ಭಜನೆಗಳ ಮೂಲಕ ಕೃಷ್ಣನನ್ನು ಆರಾಧಿಸಿ, ಮಡಕೆ ಒಡೆಯುವುದರೊಂದಿಗೆ ಸಂಭ್ರಮಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ.ಎನ್.ಕೃಷ್ಣಸ್ವಾಮಿ, ಮುಖ್ಯೋಪಾಧ್ಯಾಯಿನಿ ಜಿ.ಎನ್.ಸುಧಾ ಇತರರಿದ್ದರು.


ನಗರದ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಮಕ್ಕಳು ಕೃಷ್ಣವೇಷಧಾರಿ ಆಗಿ ಮಿಂಚಿದರು. ಉದ್ಯಮಿ ಸುಧಾಕರ್ ಶೆಟ್ಟಿ, ಪ್ರಾಂಶುಪಾಲ ವಿಶ್ವನಾಥ್ ಪಾಂಡೆ ಇದ್ದರು.


ಅಗ್ರಹಾರದಲ್ಲಿರುವ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಕೃಷ್ಣನ ವಿಗ್ರಹಕ್ಕೆ ವಿಶೇಷವಾಗಿ ಅಲಂಕರಿಸಿ ಪೂಜಿಸಿ ನಂತರ ಪ್ರಸಾದ ವಿತರಿಸಲಾಯಿತು. ಕೆಆರ್ ಠಾಣೆಯ ವೃತ್ತ ನಿರೀಕ್ಷಿಕ ಎನ್.ಸಿ.ನಾಗೇಗೌಡ. ಸಬ್ ಇನ್ಸ್‌ಪೆಕ್ಟರ್‌ಗಳಾದ ಹರೀಶ್, ಪಿ.ಆರ್.ಮಂಜು, ಪೇದೆಗಳಾದ ನಂದಿನಿ, ಅರ್ಪಿತಾ, ಲೋಕೇಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಇನ್ನಿತರರಿದ್ದರು.


ಶ್ರೀ ವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀಕೃಷ್ಣ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಭಕ್ತಿಗೀತೆಗಳು, ಭಜನೆ, ಕೃಷ್ಣನ ಬಾಲಲೀಲೆಯ ವಿನೋದವನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ನಾಗೇಶ್, ಅಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲ ಡಾ.ಎನ್.ಭಾರತಿಶಂಕರ್ ಇನ್ನಿತರರಿದ್ದರು.


ಕೂರ್ಗಳ್ಳಿಯ ವಾಸವಿ ಕಾನ್ವೆಂಟ್‌ನಲ್ಲಿ ಮಕ್ಕಳು ಕೃಷ್ಣ, ರಾಧೆ ವೇಷಧಾರಿಗಳಾಗಿ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ ಕಾರ್ಯದರ್ಶಿ ವಿ.ಅನಂತ್‌ರಾಮ್ ಮಾತನಾಡಿ, ಮಕ್ಕಳಿಗೆ ಸಂಪ್ರದಾಯ, ಸಂಸ್ಕೃತಿ ಕಲಿಸುವ ಕೆಲಸ ಶಾಲಾ ಕಾಲೇಜು ಮತ್ತು ಮನೆಗಳಲ್ಲಿ ಆಗಬೇಕಿದೆ. ಆರೋಗ್ಯವಂತ ಮಕ್ಕಳಿದ್ದರೆ ಆರೋಗ್ಯವಂತ ದೇಶ ನಿರ್ಮಾಣ ಸಾಧ್ಯ. ಮಕ್ಕಳು ಉತ್ತಮ ವಿದ್ಯೆ-ಸಂಸ್ಕಾರ ಕಲಿಯಬೇಕೆಂದರೆ ಉತ್ತಮ ಶಿಕ್ಷಕರ ಅಗತ್ಯವಿದೆ ಎಂದರು.


ಮುಖ್ಯ ಶಿಕ್ಷಕ ಜಯರಾಮೇಗೌಡ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಇನ್ನಿತರರಿದ್ದರು.