ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಬುದ್ಧ ಜಯಂತಿ ಆಚರಣೆಯನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಉದ್ಘಾಟಿಸಿದರು. ಅಧಿಕಾರಿಗಳಾದ ಪ್ರಶಾಂತ ಚನಗೊಂಡ, ನಿಂಗಪ್ಪ ಗೋಠೆ, ಸಂತೋಷ ಭೋವಿ ಇದ್ದಾರೆ.  
ಜಿಲ್ಲೆ

ಭಗವಾನ್ ಬುದ್ಧ ಜಯಂತಿ ಅದ್ದೂರಿಯಾಗಿ ಆಚರಣೆ, ಬೌದ್ಧ ವಿಹಾರದಿಂದ ಬೃಹತ್ ಮೆರವಣಿಗೆ, ಅನುರಣಿಸಿದ ‘ಬುದ್ಧಂ ಶರಣಂ ಗಚ್ಚಾಮಿ’ ಉದ್ಘೋಷ

ವಿಜಯಪುರ: ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನ್ ದಾರ್ಶನಿಕ ಭಗವಾನ್ ಬುದ್ಧರ ಜಯಂತಿಯನ್ನು ಸೋಮವಾರ ಅತ್ಯಂತ ವೈಭವದಿಂದ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಸ್ಥಳೀಯ ಜಲನಗರದಲ್ಲಿರುವ ಬುದ್ಧ ವಿಹಾರದಿಂದ ಬೃಹತ್ ಮೆರವಣಿಗೆ ನಡೆಯಿತು.

ಭಗವಾನ್ ಬುದ್ಧರ ಭಾವಚಿತ್ರ ಮೆರವಣಿಗೆಗೆ ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಿಂಗಪ್ಪ ಗೋಠೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಸಾಗಿಬಂತು. ಮಾರ್ಗದುದ್ದಕ್ಕೂ ಧ್ವಜಗಳು ರಾರಾಜಿಸಿದವು. ಬುದ್ಧಂ ಶರಣಂ ಗಚ್ಚಾಮಿ ಎಂಬ ಉದ್ಘೋಷ ಮೊಳಗಿತು.

ಬಳಿಕ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿ, ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ದಾರಿ ತೋರಿದವರು ಭಗವಾನ್ ಬುದ್ಧರು ಎಂದು ಹೇಳಿದರು.

ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನುಸರಣೆ ಮಾಡಬೇಕು. ಜಗತ್ತಿಗೆ ಶಾಂತಿ ಬೋಧಿಸಿದ ಬುದ್ಧನ ಆದರ್ಶ-ವಿಚಾರಗಳ ಬಗ್ಗೆ ಅರಿವು ಹೊಂದಬೇಕು. ಬುದ್ಧ-ಬಸವ-ಅಂಬೇಡ್ಕರ್ ಅವರ ಆದರ್ಶಗಳು ಇಡೀ ಜಗತ್ತಿಗೆ ಸಾರ್ವಕಾಲಿಕವಾಗಿವೆ. ಅವರ ಆದರ್ಶ, ವಿಚಾರಗಳು, ಚಿಂತನೆಗಳನ್ನು ತಿಳಿದುಕೊಳ್ಳುವ ಅಗತ್ಯತೆ ಇದೆ. ಶಾಲಾ ಕಾಲೇಜಿನ ಮಕ್ಕಳಿಗೆ ಬುದ್ಧರ ತತ್ವಗಳನ್ನು, ಚಿಂತನೆಗಳನ್ನು ತಿಳಿಸಬೇಕು. ಬುದ್ಧ ನಮ್ಮೆಲ್ಲರ ಮನೆಯ ಮನದ ಬೆಳಕು, ಜಗತ್ತಿನ ಭರವಸೆಯ ಬೆಳಕು, ಇಂತಹ ಮಹಾನಗರ ಆದರ್ಶ-ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬೌದ್ಧ ತತ್ವಜ್ಞಾನಿ, ಸಂಶೋಧಕರಾದ ಅನ್ನಪೂರ್ಣ ಬೆಳ್ಳೆನವರ ಉಪನ್ಯಾಸ ನೀಡುತ್ತಾ, ಬುದ್ಧರು ಶಾಂತಿ ತತ್ವಗಳನ್ನು ನೀಡಿದ್ದಾರೆ. ಅವರು ನೀಡಿದ ಪಂಚಶೀಲ ತತ್ವಗಳನ್ನು ಪಾಲಿಸುವ ಮೂಲಕ ಜೀವನ ಸಾರ್ಥಕತೆ ಹೊಂದಬೇಕು ಎಂದರು.

ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಮಾತನಾಡಿ, ಎಲ್ಲ ವೈಭೋಗವನ್ನು ತ್ಯಜಿಸಿ ಜ್ಞಾನಮಾರ್ಗವನ್ನು ತೋರಿಸಿದ ಭಗವಾನ್ ಬುದ್ಧ, ಬಾಲ್ಯದಲ್ಲಿಯೇ ತಮ್ಮ ಅರಮನೆಯ ಸೇವಕರನ್ನು ಬಂಧುಗಳಾಗಿ ಕಾಣುವ ಗುಣ ಹೊಂದುವ ಮೂಲಕ ಜನಾನುರಾಗಿಯಾಗಿದ್ದರು. ಜನರು ಬುದ್ಧನನ್ನು ಪ್ರೀತಿಸುತ್ತಿದ್ದರು. ಇಂತಹ ಗುಣಗಳನ್ನು ಹೊಂದಿದ ಬುದ್ಧನ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪಾಲನೆಗೆ ಮುಂದಾಗಬೇಕು ಎಂದರು.

ಎಎಸ್‌ಪಿ ಶಂಕರ ಮಾರಿಹಾಳ, ಮಹಾನಗರ ಪಾಲಿಕೆಯ ಉಪ ಆಯುಕ್ತ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಬುದ್ಧ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಎಡಹಳ್ಳಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಚ್.ಎ. ಮಮದಾಪುರ ನಿರೂಪಿಸಿದರು.