ಅರಸೀಕೆರೆ ತಾಲೂಕಿನ ಹಂದಿಮರಟಿ ಗುಡ್ಡದಲ್ಲಿ ಜೆಸಿಬಿ ಬಳಸಿ ಮಣ್ಣು ದೋಚುತ್ತಿರುವ ದೃಶ್ಯ.  
ಜಿಲ್ಲೆ

ಹಂದಿಮರಟಿ ಗುಡ್ಡದಲ್ಲಿ ಮಣ್ಣು ಲೂಟಿ

ಮಾದೇಶ್ ತಿ.ನರಸೀಪುರ

ಅರಸೀಕೆರೆ: ತಾಲೂಕಿನ ಯಾದಾಪುರ ರಸ್ತೆಗೆ ಕೂಗಳತೆ ದೂರದಲ್ಲಿರುವ ಹಂದಿಮರಟಿ ಗುಡ್ಡದಲ್ಲಿ ಮಣ್ಣು ಲೂಟಿ ನಡೆಯುತ್ತಿದೆ.

ಗುಡ್ಡಕ್ಕೆ ಆಗಮಿಸುವ ಜೆಸಿಬಿ, ಹಿಟಾಚಿ ಯಂತ್ರಗಳು ನೂರಾರು ಲೋಡ್ ಮಣ್ಣನ್ನು ಟಿಪ್ಪರ್‌ಗಳ ಮೂಲಕ ಸಾಗಣೆ ಮಾಡುತ್ತಿವೆ. ತುಮಕೂರಿನಿಂದ ಶಿವಮೊಗ್ಗ ಸಂಪರ್ಕಿಸುವ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಜಲ್ಲಿಕಲ್ಲು ಹಾಗೂ ಮಣ್ಣು ಸಾಗಣೆಗೆ ಅವಕಾಶ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದರೂ ಮಣ್ಣು ಸಾಗಣೆ ಮಾತ್ರ ನಿಂತಿಲ್ಲ. ಗುಡ್ಡದಿಂದ ಭಾರಿ ಪ್ರಮಾಣದ ಮಣ್ಣು ಎಲ್ಲಿ ಹೋಗುತ್ತಿದೆ, ಇದರ ಹಿಂದೆ ಇರುವವರು ಯಾರು? ಎಂಬುದನ್ನು ಪತ್ತೆ ಮಾಡುವುದು ತಾಲೂಕು ಆಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿಗೆ ತಾತ್ಕಾಲಿಕ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಈಗಾಗಲೇ ಭಾರಿ ಆಳುದ್ದದ ಗುಂಡಿ ನಿರ್ಮಾಣವಾಗಿದ್ದು, ಜನ, ಜಾನುವಾರುಗಳನ್ನು ಅಪಾಯಕ್ಕೆ ಆಹ್ವಾನಿಸುವಂತಿದೆ. ಗುತ್ತಿಗೆದಾರರು ಕಾಟಾಚಾರಕ್ಕೆ ಎಂಬಂತೆ ತಂತಿ ಬೇಲಿ ಹಾಕಿ ಕೈತೊಳೆದುಕೊಂಡಿದ್ದಾರೆ.

ಜೆಸಿಬಿ, ಹಿಟಾಚಿ ಬಳಸಿ ಗುಡ್ಡ ಕೊರೆಯಲಾಗುತ್ತಿದೆ. ನರಿ, ನವಿಲು, ಕಾಡುಹಂದಿ ಸೇರಿದಂತೆ ಕಾಡುಪ್ರಾಣಿಗಳು ಆಶ್ರಯ ಕಳೆದುಕೊಳ್ಳುವ ಭೀತಿಯೂ ಹೆಚ್ಚಿದೆ. ಮಲ್ಲೇನಹಳ್ಳಿ, ಯದಾಪುರ, ಸಂಕೋಡನಹಳ್ಳಿ, ಕಾಟೀಕೆರೆ, ಮುದ್ದನಹಳ್ಳಿ ಗ್ರಾಮಗಳ ರೈತರ ಜಾನುವಾರು ಮೇವಿಗೂ ಮಣ್ಣು ಸಾಗಣೆ ಅಡ್ಡಿಯಾಗಿದೆ. ಜಾಜೂರು ಗ್ರಾಮ ಪಂಚಾಯಿತಿಯಿಂದ ಗುಡ್ಡದ ತಪ್ಪಲಿನಲ್ಲಿ ಕಸ ಸಂಗ್ರಹಗಾರ ನಿರ್ಮಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದ್ದು ಗಂಗಮ್ಮನ ದೊಣೆ ಸನ್ನಿಧಿ ಇದೀಗ ವಿನಾಶದ ಹಂಚಿಗೆ ಬಂದು ನಿಂತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಚತುಷ್ಪಥ ಹೆದ್ದಾರಿ ಕೆಲಸಕ್ಕೆ ಯಳವಾರೆ ಕೆರೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ಕೆರೆಗಳಲ್ಲಿ ನಿಯಮಾನುಸಾರ ಮಣ್ಣು ತೆಗೆಯಲು ಅನುಮತಿ ನೀಡಲಾಗಿತ್ತು. ಇದರಿಂದಾಗಿ ಹಲವು ದಶಕಗಳಿಂದ ಸೇಂದಿ ವನ, ಗೋಮಾಳದಲ್ಲಿ ಉಳುಮೆ ಮಾಡಿಕೊಂಡಿದ್ದ ರೈತರು ಜಮೀನು ಮಂಜೂರಾತಿ ಹಾಗೂ ಹಕ್ಕು ಪತ್ರ ಪಡೆದಿದ್ದು ಸ್ವಯಂ ಮಣ್ಣು ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿರುವ ಅಂಶವೂ ಗೊತ್ತಾಗಿದೆ. ಸರ್ಕಾರ ಹಾಗೂ ರೈತರ ಸಮ್ಮತಿ ಲಾಭ ಪಡೆದಿರುವ ಕೆಲವರು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಭೂತಾಯಿ ಒಡಲು ಬರಿದು ಮಾಡುವ ಕೃತ್ಯದಲ್ಲಿ ತೊಡಗಿದ್ದು ಅಂತರ್ಜಲ ಕುಸಿಯುವ ಅಪಾಯ ಗೋಮಾಳ ಹಾಗೂ ಕೆರೆಯಂಚಿಗೆ ಜಮೀನು ಹೊಂದಿರುವ ಅನ್ನದಾತರಲ್ಲಿ ಎದುರಾಗಿದೆ. ಸದ್ಯ ಯಳವಾರೆ ಕೆರೆಯಂಗಳ ಇದಕ್ಕೆ ಹೊರತಾಗಿಲ್ಲ.

ಕೆರೆ ಹಾಗೂ ಗೋಮಾಳಗಳ ಆಸುಪಾಸಿನ ಗ್ರಾಮಸ್ಥರ ಸಮನ್ವಯದ ಕೊರತೆ ಹಾಗೂ ಧನದಾಹ ಮನಬಂದಂತೆ ಮಣ್ಣು ಅಗೆದು ಸಾಗಿಸಲು ಪ್ರಮುಖ ಕಾರಣ ಎನ್ನಲಾಗಿದೆ. ಹೊಂದಾಣಿಕೆ ಕೊರತೆ ನೆಪ ಮುಂದಿಡುವ ಮಧ್ಯವರ್ತಿಗಳು ಗ್ರಾಮಕ್ಕೆ ಇಂತಿಷ್ಟು ದೇಣಿಗೆ ನೀಡಿ ಸಮಾಧಾನಪಡಿಸುವ ತಂತ್ರಗಾರಿಕೆಯೂ ಕೆಲಸ ಮಾಡುತ್ತಿದೆ. ಜತೆಗೆ ತಮ್ಮ ಇಲಾಖಾ ವ್ಯಾಪ್ತಿಗೆ ಸೇರಿದ ಕೆರೆ, ಕುಂಟೆಗಳನ್ನು ಅಧಿಕಾರಿಗಳು ಸಕಾಲದಲ್ಲಿ ಪರಿಶೀಲನೆ ಮಾಡದಿರುವುದು ಸಮಸ್ಯೆ ತಂದಿಡುತ್ತಿದೆ. ಗಲಾಟೆ, ಪ್ರತಿಭಟನೆ, ದೂರುಗಳು ಬಂದಾಗ ಭೇಟಿ ನೀಡಿ ತಿಪ್ಪೆ ಸಾರಿಸಿ ಬರುತ್ತಿರುವುದು ಅನುಮಾನ ಹುಟ್ಟುಹಾಕಿದೆ.

ಲಭ್ಯವಿರುವ ಮಾಹಿತಿ ಅನುಸಾರ ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮಣ್ಣು ತೆಗೆಯಲು ಅನುಮತಿ ಪತ್ರ ನೀಡಲಾಗಿತ್ತು. ಇದೀಗ ಗುಡ್ಡಗಳನ್ನು ದೋಚುತ್ತಿರುವುದು ಜಗಜ್ಜಾಹೀರಾಗಿದೆ. ಸದಾ ಬರದ ದವಡೆಯಲ್ಲಿ ಸಿಲುಕಿ ನಲುಗುತ್ತಿರುವ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ದಂಧೆಗೆ ಕಡಿವಾಣ ಇಲ್ಲದಂತಾಗಿದೆ. ಚುನಾಯಿತ ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸುವರೆ ಎಂಬುದನ್ನು ಕಾದುನೋಡಬೇಕಿದೆ.

ಹಂದಿಮರಟಿ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಭೇಟಿ ಸುಳಿವು ಪಡೆದು ಜಾಗ ಖಾಲಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಗುಡ್ಡ, ಕೆರೆ, ಕುಂಟೆಗಳ ಮಣ್ಣು ದೋಚುವುದನ್ನು ಸಹಿಸುವುದಿಲ್ಲ. ವಾಹನಗಳ ಮೂಲಕ ಮಣ್ಣು ಸಾಗಿಸುವ ಕೃತ್ಯ ಕಂಡಲ್ಲಿ ತಕ್ಷಣವೇ ಮಾಹಿತಿ ನೀಡಿದರೆ ಕಾನೂನಿನ ಅನುಸಾರ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಯಾರಾದರೂ ಬೆದರಿಕೆ ಹಾಕಿದರೆ ಪೊಲೀಸರಿಗೆ ದೂರು ನೀಡಬಹುದು

ಎಂ.ಜಿ.ಸಂತೋಷ್‌ಕುಮಾರ್ ತಹಸೀಲ್ದಾರ್, ಅರಸೀಕೆರೆ

ತಾಲೂಕಿನ ಹಂದಿಮರಟಿ, ಜಾಜೂರು, ಸೇರಿದಂತೆ ವಿವಿಧೆಡೆ ಅಕ್ರಮ ಮಣ್ಣು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರ್ ಬಳಕೆ ಮಾಡಿ ಮಣ್ಣು ತೆಗೆಯುವ ಮತ್ತು ಸಾಗಿಸುವ ವಿಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ನನಗೆ ಕೊಲೆ ಬೆದರಿಕೆ ಹಾಕಲಾಗಿದೆ. ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ಮುಂದಾದವರ ಮೇಲೆ ಹಲ್ಲೆ ನಡೆಯುವ ಅಪಾಯ ಹೆಚ್ಚಿದ್ದು ದಂಧೆಗೆ ಕಡಿವಾಣ ಹಾಕಲು ತಾಲೂಕು ಹಾಗೂ ಜಿಲ್ಲಾಡಳಿತ ಗಂಭೀರ ಪ್ರಯತ್ನ ಮಾಡಬೇಕಿದೆ.

ಮಲ್ಲೇನಹಳ್ಳಿ ಹೊಳೆಯಪ್ಪ ರೈತ ಮುಖಂಡ, ಅರಸೀಕೆರೆ