ಧಾರವಾಡ: ಮಲಪ್ರಭಾ ಕಾಲುವೆಯ ನವೀಕರಣ ಕಾಮಗಾರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಈ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.
ನಗರದ ಮಲಪ್ರಬಾ ನೀರಾವರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಽ ಧರಣಿ ಸ್ಥಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 114 ಕಿ.ಮೀ. ಕಾಲುವೆ ನವೀಕರಣ ಕಾಮಗಾರಿಗೆ 2,178 ಕೋಟಿ ರೂ.ಗಳಿಗೆ ಡಿಪಿಆರ್ ಮಾಡಿಕೊಂಡು, ಕಾಮಗಾರಿ ಸಂಪೂರ್ಣ ಮುಗಿಸದೆ ಹಣ ಪಡೆದಿದ್ದಾರೆ. ಈಗಾಗಲೇ ಗುತ್ತಿಗೆದಾರರು 1,043 ಕೋಟಿ ರೂ. ಬಿಲ್ ಪಡೆದುಕೊಂಡಿದ್ದು, ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ ಎಂದರು.
1,120 ಕೋಟಿ ರೂ.ಗಳಲ್ಲಿ ಬ್ರಿಡ್ಜ್, ಸರ್ವಿಸ್ ರಸ್ತೆ, ಜಂಗಲ್ ಕ್ಲಿಯರೆನ್ಸ್ ಎಲ್ಲವೂ ಮುಗಿಯುತ್ತವೆ. ಉಳಿದ 1,038 ಕೋಟಿ ರೂ. ಯಾರ ಜೇಬಿಗೆ ಹೋಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ನವೀಕರಣ ಕಾಮಗಾರಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಕೆಲವೆಡೆ ಕೆಲಸ ಮಾಡದೆ ಹಣ ತೆಗೆಯಲಾಗಿದೆ. ಹಣ ಹೊಡೆಯುವ ದುರುದ್ದೇಶದಿಂದ ಡಿಪಿಆರ್ ಮೊತ್ತವನ್ನು ಅವೈಜ್ಞಾನಿಕವಾಗಿ ಹೆಚ್ಚಿಗೆ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಲಾಗಿದೆ ಎಂದು ಸೊಬರದಮಠ ಹೇಳಿದರು.
ಮಲ್ಲಣ್ಣ ಅಲೇಕರ, ಗುರು ರಾಯನಗೌಡರ, ಸಣ್ಣಫಕ್ಕೀರಪ್ಪ ಜೋಗಣ್ಣವರ, ಶಿವಪ್ಪ ಹೊರಕೇರಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.