ಮೈಸೂರು: ಕಟ್ಟಡ ನಿರ್ಮಾಣಕಾರರು ಕೇವಲ ಉದ್ಯಮ ದೃಷಿಕೋನದಿಂದ ಕಾರ್ಯನಿರ್ವಹಿಸದೇ ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನದಂತಹ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಬಡಾವಣೆಗಳನ್ನು ಅಭಿವೃದ್ಧಿಗೊಳಿಸಬೇಕಾಗುತ್ತದೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು.
ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ)ದಿಂದ ನಗರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಸಮಾವೇಶಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬಿಲ್ಡರ್ಸ್ ಹಾಗೂ ಡೆವಲಪರ್‌ಗಳು ಹೊಸ-ಹೊಸ ಸವಾಲುಗಳನ್ನು ಎದುರಿಸಲು ಯಾವಾಗಲೂ ಸಿದ್ಧರಾಗಿರಬೇಕು. ಕೇವಲ ಅಭಿವೃದ್ಧಿ, ಲಾಭದ ದೃಷ್ಠಿಕೋನ ಇಟ್ಟುಕೊಂಡು ಹೋದರೆ ಮುಂದೆ ಪರಿಸರದ ಮೇಲಾಗುವ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದರು.
ಬಡಾವಣೆ ನಿರ್ಮಾಣ ಸ್ಥಳದ ಲ್ಯಾಂಡ್‌ಸ್ಕೇಪ್, ಚರಂಡಿ, ಮಳೆ ನೀರಿನ ಹರಿವು ಸಾಗುವ ದಿಕ್ಕು ಇವುಗಳನ್ನು ಸಮರ್ಪಕವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಎಚ್ಚರಿಸಿದರು.
ಬೆಂಗಳೂರಿನಂತಹ ಮಹಾನಗರಗಳು ಜನದಟ್ಟಣೆಯಿಂದ ಬಳಲಿಹೋಗಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನಂತಹ ಎರಡನೇ ಹಂತದ ನಗರಗಳನ್ನು ಅಭಿವೃದ್ಧಿ ಮಾಡುವ ಕಡೆ ಗಮನಹರಿಸಬೇಕು. ಪ್ರಸ್ತುತ ಅಭಿವೃದ್ಧಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಯಾವುದೇ ಯೋಜನೆಯನ್ನು ಅನುಷ್ಠಾನ ಮಾಡುವ ಹಂತದಲ್ಲೇ ನಿಜವಾದ ಸವಾಲು ಇರುತ್ತದೆ. ಅವುಗಳನ್ನು ಆರಂಭಿಕ ಹಂತದಲ್ಲಿಯೇ ಸರಿ ಪಡಿಸಬೇಕು ಎಂದು ಹೇಳಿದರು.
ಒಂದು ಬಡಾವಣೆ ಎಂದರೆ ಅಲ್ಲಿ ಉದ್ಯಾನ, ಇಂತಿಷ್ಟೇ ಅಗಲದ ರಸ್ತೆ, ಒಳಚರಂಡಿ, ಕಸ ಸಂಗ್ರಹಗಾರ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರಬೇಕು. ಜತೆಗೆ ಸರ್ಕಾರದ ನಿಯಮಾವಳಿಗಳನ್ನು ಬಿಲ್ಡರ್ಸ್‌ಗಳು ಗಮನದಲ್ಲಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಕರೆ ಇರಲಿ, 10-20 ಗುಂಟೆಗಳಲ್ಲೆಲ್ಲಾ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪರಿಣಾಮ ಬಡಾವಣೆಗಳು ಮೂಲ ಸೌಲಭ್ಯಗಳಿಲ್ಲದೆ ಅಲ್ಲಿಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ 100 ಎಕರೆ, 200 ಎಕರೆ ಜಮೀನುಗಳನ್ನು ಪಡೆದು ವಿವಿಧೋದ್ದೇಶ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಸರ್ವರ್ ಸಮಸ್ಯೆ ಬಗೆಹರಿಸಿ:
ಕರ್ನಾಟಕ ಕ್ರೆಡೈ ಅಧ್ಯಕ್ಷ ಪ್ರದೀಪ್ ವಿ.ರಾಯ್ಕರ್ ಮಾತನಾಡಿ, ಸರ್ಕಾರ ಟೌನ್ ಪ್ಲಾೃನಿಂಗ್, ಬಡಾವಣೆ ಅನುಮೋದನೆ ಮತ್ತಿತರ ಎಲ್ಲವನ್ನೂ ಡಿಜಿಟಲೀಕರಣ ಮಾಡಿದೆ. ಆದರೆ ಯಾವಾಗಲೂ ಸರ್ವರ್ ಡೌನ್ ಸಮಸ್ಯೆ ಇರುವುದರಿಂದ ಸಕಾಲದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ನಿಗದಿತ ಕಾಲದಲ್ಲಿ ಯೋಜನೆ ಸಿದ್ಧಪಡಿಸಲು ಆಗುವುದಿಲ್ಲ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ನೂತನ ತಂತ್ರಜ್ಞಾನವನ್ನು ತಿಳಿದುಕೊಂಡಿರುವ ಕಾರ್ಮಿಕರ ಕೊರತೆ ಇದ್ದು, ಕಾರ್ಮಿಕರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಕಟ್ಟಡ ಎತ್ತರ 21 ಮೀಟರ್‌ಗಳಿಂತ ಹೆಚ್ಚು ಇರಬಾರದು ಎನ್ನುವ ನಿಯಮವನ್ನು ಮರು ಪರಿಶೀಲನೆ ಮಾಡಬೇಕು. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಮನೆಗಳು, ಅರ್ಪಾಟ್‌ಮೆಂಟ್‌ಗಳು, ಇನ್ನಿತರೆ ಕಟ್ಟಡಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಿಕೊಂಡು ಹಸಿರೀಕರಣಕ್ಕೆ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ವಿವರಿಸಿದರು.
ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕ್ರೆಡೈ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ರಾಜಾ ಶ್ರೀನಿವಾಸ, ಕೇರಳ ಕ್ರೆಡೈ ಅಧ್ಯಕ್ಷ ರವಿ ಜಾಕೋಬ್, ರಾಷ್ಟ್ರೀಯ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜರೆಡ್ಡಿ, ಮೈಸೂರು ಕ್ರೆಡೈ ಛೇರ‌್ಮನ್ ಎನ್.ಎಸ್.ಮುರಳೀಧರ್, ಅಧ್ಯಕ್ಷ ಡಿ.ಶ್ರೀಹರಿ, ಕಾರ್ಯದರ್ಶಿ ಎಲ್.ಅರುಣ್ ಪಂಡಿತ್, ಸಮ್ಮೇಳನ ಆಯೋಜನ ಸಮಿತಿ ಅಧ್ಯಕ್ಷ ಬಿ.ಧನಂಜಯ, ಕೆ.ಎನ್.ರವಿಶಂಕರ್ ಇತರರು ಇದ್ದರು.
ಬಿಲ್ಡರ್ಸ್‌ಗಳ ತಪ್ಪಿಗೆ ನಿವಾಸಿಗಳಿಗೆ ದಂಡ
ಮೈಸೂರು: ಕಟ್ಟಡ ನಿರ್ಮಾಣಕಾರರು ಮನೆಗಳು ಅಥವಾ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವಾಗ ಮಾಡಿದ ನಿಯಮ ಉಲ್ಲಂಘನೆಯ ಪರಿಣಾಮವನ್ನು ನಿವಾಸಿಗಳು ಅನುಭವಿಸಬೇಕಾಗುತ್ತದೆ ಎಂದು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಬೇಸರ ವ್ಯಕ್ತಪಡಿಸಿದರು.
ಆಪಾರ್ಟ್‌ಮೆಂಟ್‌ಗಳಲ್ಲಿ ಕೇವಲ ಶ್ರೀಮಂತರೇ ವಾಸವಾಗಿಲ್ಲ. ಮಧ್ಯಮವರ್ಗದ ಹಿರಿಯ ನಾಗರಿಕರು ಇದ್ದಾರೆ. ಅಂತಹವರು ಬಿಲ್ಡರ್‌ಗಳು ಮಾಡಿರುವ ತಪ್ಪಿಗೆ ಈಗ ದುಪ್ಪಟ್ಟು ತೆರಿಗೆ ಕಟ್ಟುವಂತಾಗಿದೆ. ಕೆ.ಆರ್.ಕ್ಷೇತ್ರದಲ್ಲಿ 1400ಕ್ಕೂ ಹೆಚ್ಚು ಇಂತಹ ಪ್ರಕರಣಗಳು ಇದ್ದು, ಇಡೀ ರಾಜ್ಯದ ಸಮಸ್ಯೆ ಇದಾಗಿದೆ ಎಂದರು.
ವರ್ಷಾನುಗಟ್ಟಲೆ ದುಪ್ಪಟ್ಟು ತೆರಿಗೆ ಪಾವತಿಸುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿ. ಅದನ್ನು ಸರ್ಕಾರದ ಮುಂದಿಟ್ಟು ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರೇರಾ ಕಾನೂನು ಜಾರಿಗೆ ಬಂದ ಬಳಿಕ ಹಲವ ದೂರುಗಳಿಗೆ ನ್ಯಾಯ ಸಿಕ್ಕಿದೆ. ಆದರೆ ಅದು ಡಿಸಿ, ಎಸಿ, ತಹಸೀಲ್ದಾರ್ ಹಂತದಲ್ಲಿ ರೇರಾ ಆದೇಶಗಳು ಕೇವಲ ಪತ್ರ ವ್ಯವಹಾರದಲ್ಲೇ ನಿಂತು ಹೋಗುತ್ತಿವೆ. ಆದ್ದರಿಂದ ಅದಕ್ಕೆ ಒಂದು ತಾರ್ಕಿಕ ಅಂತ್ಯಹಾಡಲು ಮುಂದಾಗಬೇಕು ಎಂದು ಹೇಳಿದರು.