ಜಿಲ್ಲೆ

ಕೆರೆಯ ನೋಡಿರಣ್ಣ… ಹೂಳು ತೆಗೆಸಿರಣ್ಣ…

ಬಸವರಾಜ ವೀರಪ್ಪ ಗರಗ

ಗಿರೀಶ ದೇಶಪಾಂಡೆ ಹಾನಗಲ್ಲ

ಆಗಲೇ ಜೂನ್ ತಿಂಗಳು ಮುಗಿದಿದೆ. ಕೃಷಿ ಪ್ರಧಾನ ಹಾನಗಲ್ಲ ತಾಲೂಕಿನ ಮೇಲೆ ಏಕೋ ವರುಣ ದೇವ ಮುನಿಸಿಕೊಂಡಿದ್ದಾನೆ. ರೈತರು ಮುಖ ಮೇಲೆ ಮಾಡಿ ಮುಗಿಲು ನೋಡುತ್ತಿದ್ದಾರೆ. ಮೋಡ ಕಂಡರೂ ಮಳೆ ಜೋರಾಗಿ ಬರುತ್ತದೆ ಎಂಬ ವಿಶ್ವಾಸ ಬರುತ್ತಿಲ್ಲ. ತಲೆ ಬಾಗಿಸಿದ ರೈತರಿಗೆ ಕಣ್ಣೆದುರಿನ ಕೆರೆಯಲ್ಲೂ ನೀರು ಕಾಣುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಕೃಷಿ ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ‘ನೀರಿನ ಗ್ಯಾರಂಟಿ’ ಕೊಡಲೇಬೇಕಿದೆ.

ತಾಲೂಕಿನಾದ್ಯಂತ ಸಣ್ಣ ನೀರಾವರಿ ಇಲಾಖೆಯ 112 ಕೆರೆಗಳು, ಬೃಹತ್ ನೀರಾವರಿ ಇಲಾಖೆಯ 92, ಗ್ರಾಮ ಪಂಚಾಯಿತಿಗಳ 660, ಅರಣ್ಯ ಇಲಾಖೆಗೆ ಒಳಪಡುವ 56 ಸೇರಿ ಒಟ್ಟು 920 ಕೆರೆಗಳಿವೆ.

ಭೀಕರ ಬರಗಾಲ, ನೀರಿನ ಕೊರತೆ, ಅಂತರ್ಜಲ ಕುಸಿತಕ್ಕೆ ಸರ್ಕಾರವೇ ಪರೋಕ್ಷವಾಗಿ ಕಾರಣವಾಗಿದೆ. ಕುಡಿಯುವ ನೀರಿಗಾಗಿ ಉದ್ದುದ್ದ ಪೈಪ್​ಲೈನ್ ಅಳವಡಿಸಿ ನೀರು ಹರಿಸುವ ಹರಸಾಹಸದ ಭಾಷಣ- ಭರವಸೆ ಬದಿಗಿಟ್ಟು, ಸ್ಥಳೀಯ ಜಲಮೂಲಗಳನ್ನು ಅಭಿವೃದ್ಧಿಪಡಿಸಿದರೆ ನೀರಿನ ದಾಹ ನೀಗಿಸಬಹುದು.

ನೀರಾವರಿ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಹಣವನ್ನು ಯಾರದ್ದೋ ಮಡಿಲಿಗೆ ಹಾಕುವ ಬದಲು ಹಾನಗಲ್ಲ ತಾಲೂಕಿನ 900ಕ್ಕಿಂತ ಹೆಚ್ಚು ಕೆರೆಗಳನ್ನು ಎಲ್ಲ ರೀತಿಯಿಂದ (ಸುಸ್ಥಿರ) ಅಭಿವೃದ್ಧಿ ಮಾಡಿ, ಬಿದ್ದ ಮಳೆ ನೀರು ಶೇಖರಣೆಯಾಗುವಂತೆ ಮಾಡಲಿ. ಕೆರೆ ಕಟ್ಟಿದ ಪುಣ್ಯಾತ್ಮರ ಆಶಯಗಳನ್ನು ಸರ್ಕಾರಗಳು ಗೌರವಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ನೀರಿನ ಬಳಕೆ ಹೆಚ್ಚಳ, ಕೆರೆಗಳು ಸಾಮರ್ಥ್ಯ ಕುಸಿತ, ಮಳೆಯಲ್ಲಿ ವ್ಯತ್ಯಾಸ ಇವೆಲ್ಲ ಅತ್ಯಂತ ಗಂಭೀರ ಸಂಗತಿಗಳು. ಇದರೊಂದಿಗೆ ಅಂತರ್ಜಲ ಕುಸಿತಗೊಂಡು, ಕೊಳವೆ ಬಾವಿಗಳೂ ಬತ್ತಿಹೋಗುತ್ತಿವೆ. ನೀರಿನ ಸಮಸ್ಯೆ ಇನ್ನೂ ಉಲ್ಬಣಗೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಪ್ರಾಕೃತಿಕ ಜಲಮೂಲಗಳನ್ನು ಉಳಿಸಬೇಕಿದೆ. ಹಾನಗಲ್ಲ ತಾಲೂಕು ಮಲೆನಾಡಿನ ಸೆರಗಿನಲ್ಲಿದ್ದರೂ ನೀರಿಲ್ಲದೇ ಬಯಲುಸೀಮೆಯಂತೆ ಗೋಚರಿಸುತ್ತಿದ್ದು, ಮುಂದೆ ಎದುರಾಗಬಹುದಾದ ಗಂಭೀರ ಹಾಹಾಕಾರವನ್ನು ತಡೆಯಲು ಈಗಲೇ ವ್ಯವಸ್ಥಿತ ಕ್ರಮಗಳು ಆಗಬೇಕಿವೆ.

ಮಾನ್ಯತೆ ಹೆಚ್ಚಿಸಿಕೊಳ್ಳಲಿ...

ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಇಡೀ ಹಾನಗಲ್ಲ ತಾಲೂಕಿನ ಜನರ ಪ್ರತಿನಿಧಿಯಾಗಿರುವ ಶಾಸಕ ಶ್ರೀನಿವಾಸ ಮಾನೆ ಅವರು ಆದ್ಯತೆ ಮೇರೆಗೆ ಮಾಡಬೇಕು ಎಂದು ರೈತರು ಸೇರಿ ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. ಲಕ್ಷಾಂತರ ಕೋಟಿ ರೂಪಾಯಿಗಳ ಬಜೆಟ್ ಖ್ಯಾತಿಯ ಸರ್ಕಾರಕ್ಕೆ ಒಂದು ತಾಲೂಕನ್ನು ಬರಗಾಲದ ದವಡೆಯಿಂದ ಪಾರು ಮಾಡಲು ಒಂದೈನೂರು ಕೋಟಿ ರೂಪಾಯಿ ಕೊಡುವುದು ಕಷ್ಟವೇನಲ್ಲ. ಶಾಸಕರು ಇಲ್ಲಿಯ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ತಿಂಗಳೊಳಗೆ ವಿಶೇಷ ಅನುದಾನ ಮಂಜೂರಿ ಮಾಡಿಸಿಕೊಂಡು ಬರಲಿ. 2002ನೇ ಇಸ್ವಿಯಲ್ಲಿ ಆದಂತೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆರೆ ಅಭಿವೃದ್ಧಿ ಸಂಘ ರಚಿಸಿ, ಕೆರೆಗಳಿಗೆ ಸುಂದರ ರೂಪ ನೀಡಲಿ. ನಮ್ಮ ಈ ಬೇಡಿಕೆಯನ್ನು ಮಾನ್ಯ ಮಾಡಿ ಈಡೇರಿಸುವ ಮೂಲಕ ಶಾಸಕ ಮಾನೆಯವರು ತಮ್ಮ ಮಾನ್ಯತೆ ಹೆಚ್ಚಿಸಿಕೊಳ್ಳಲಿ ಎನ್ನುತ್ತಾರೆ ಅನ್ನದಾತರು.

ಕಳೆದ ವರ್ಷ ತುಂಬಿದ್ದು 63 ಕೆರೆ

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 112 ಕೆರೆಯಡಿ ತಾಲೂಕಿನ 20,818 ಎಕರೆ ಅಚ್ಚುಕಟ್ಟು ಪ್ರದೇಶ ನೀರಾವರಿಗೊಳಪಡಲಿದೆ. ಕಳೆದ ವರ್ಷ 112ರಲ್ಲಿ ತುಂಬಿದ್ದು 63 ಕೆರೆ ಮಾತ್ರ! ಈ ಇಲಾಖೆಗೆ ಕೆರೆಗಳ ಅಭಿವೃದ್ಧಿಗೆ ಹಿಂದಿನ ಯಾವುದೇ ಸರ್ಕಾರಗಳೂ ಅನುದಾನ ನೀಡಿಲ್ಲ. ಹೀಗಾಗಿ ಹೆಸರಿಗೆ ಮಾತ್ರ ಉಳಿದುಕೊಂಡಿವೆ ಎನ್ನಬಹುದಾಗಿದೆ.

ಧರ್ವ ನದಿ ಕೃಪೆ

ಬೃಹತ್ ನೀರಾವರಿ ಇಲಾಖೆಯ ಅಡಿಯಲ್ಲಿನ 92 ಕೆರೆಗಳಿಗೆ ಧರ್ವ ಜಲಾಶಯದಿಂದ ಪ್ರತಿ ವರ್ಷವೂ ನೀರು ತುಂಬಿಸಲಾಗುತ್ತದೆ. ಧರ್ವ ನದಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಿಂದ ಹಾನಗಲ್ಲ ತಾಲೂಕು ಪ್ರವೇಶಿಸುತ್ತದೆ. ಮುಂಡಗೋಡ, ಶಿರಸಿ ತಾಲೂಕಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾದರೆ ಧರ್ವ ನದಿ ತುಂಬಿ ಹರಿಯುತ್ತದೆ. ಈ 92 ಕೆರೆಗಳ ನೀರು ಧರ್ವ ನದಿಯ ಕೃಪೆ. ಅಂತೆಯೇ, ಧರ್ವ ನದಿಗೆ ಹಾನಗಲ್ಲ ಶಾಸಕರು ಪೂಜೆ ಸಲ್ಲಿಸುವ ಪರಿಪಾಠ ನಡೆದುಕೊಂಡು ಬಂದಿದೆ.

ತಾಲೂಕಿನಲ್ಲಿಯೇ ಅತಿದೊಡ್ಡ ಕೆರೆ ನರೇಗಲ್ ಗ್ರಾಮದಲ್ಲಿದೆ. ಈ ವರ್ಷ ಸ್ಥಳೀಯ ರೈತರೇ ಒಂದಷ್ಟು ಭಾಗದಲ್ಲಿ ಹೂಳೆತ್ತಿ ಹೊಲಗಳಿಗೆ ಮಣ್ಣು ಕೊಂಡೊಯ್ದಿದ್ದಾರೆ.

ನೀರಾವರಿ ಇಲಾಖೆಗೆ ಕಾಮಗಾರಿ ಕೈಗೊಳ್ಳಲು ಹಿಂದೆಂದೂ ಅನುದಾನ ಬಂದಿಲ್ಲ.

ತಾಲೂಕಿನ ನರೇಗಲ್ ಕೆರೆ (370 ಎಕರೆ), ಬೆಳವತ್ತಿ ಕೆರೆ (162 ಎಕರೆ), ಹಾನಗಲ್ಲಿನ ಆನೆಕೆರೆ (119 ಎಕರೆ), ನೀರಲಗಿ ಮತ್ತು ಆಡೂರ (187 ಎಕರೆ) ಕೆರೆಗಳು ಬಹುದೊಡ್ಡ ವಿಸ್ತಾರ ಹೊಂದಿವೆ. ಇವುಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆಯಾದರೆ ಮಾತ್ರ ಕಾಮಗಾರಿ ಕೈಗೊಳ್ಳಬಹುದಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಸಾಧ್ಯವಾಗಬಲ್ಲದು.

ಜಲಸಂವರ್ಧನ ಯೋಜನೆ:

ತಾಲೂಕಿನ ಕೆರೆಗಳಿಗೆ ವರದಾನವಾಗಿ 2002ರಲ್ಲಿ ಬಂದಿದ್ದ ಜಲಸಂವರ್ಧನ ಯೋಜನೆ ಮೂಲಕ ಕೆರೆ ಅಭಿವೃದ್ಧಿ ಸಂಘಗಳನ್ನು ರಚಿಸಿ, ಕೋಟ್ಯಂತರ ರೂ.ಗಳಲ್ಲಿ 227 ಕೆರೆಗಳನ್ನು ಜೀಣೋದ್ಧಾರಗೊಳಿಸಲಾಗಿತ್ತು. ಈ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆಗೊಳಿಸಿದ್ದ ಸರ್ಕಾರ ಸ್ಥಳೀಯ ರೈತರ ಮೂಲಕವೇ ಪಾರದರ್ಶಕ ಕಾಮಗಾರಿ ನಡೆಸಿ ಮೆಚ್ಚುಗೆಗೆ ಪಾತ್ರವಾಯಿತು. ಅದರ ನಂತರದಲ್ಲಿ ಕೆರೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ.

2019ರಲ್ಲಿ ಅತಿವೃಷ್ಟಿಯಾದ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಕೆರೆಗಳ ಒಡ್ಡು ಒಡೆದುಹೋಗಿದ್ದು, ಅವುಗಳಲ್ಲಿ ನೀರು ನಿಲ್ಲದಂತಾಗಿದೆ. ಆದರೆ, 5 ವರ್ಷಗಳಾದರೂ ಅವುಗಳ ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸದೇ ರೈತ ಸಮೂಹವನ್ನು ನಿರ್ಲಕ್ಷ್ಯ ಮಾಡಿದೆ.

2002ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಧಾನಸಭೆ ಉಪಸಭಾಪತಿ ಆಗಿದ್ದೆ. ಆಗ ಜಲಸಂವರ್ಧನ ಯೋಜನೆಯಡಿ ಹಾನಗಲ್ಲ ತಾಲೂಕನ್ನು ನಬಾರ್ಡ್ ಅನುದಾನದಲ್ಲಿ ಪ್ರಾಯೋಗಿಕವಾಗಿ ತೆಗೆದುಕೊಳ್ಳಲಾಗಿತ್ತು. ನಂತರದ 22 ವರ್ಷಗಳಲ್ಲಿ ಮತ್ತೆ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿಲ್ಲ. ಸರ್ಕಾರ ಅಂಥ ಕೆರೆ ಅಭಿವೃದ್ಧಿ ಯೋಜನೆಯನ್ನು ಮೇಲಿಂದ ಮೇಲೆ ಜಾರಿಗೊಳಿಸುವ ಅಗತ್ಯವಿದೆ. ಅಂತರ್ಜಲ ವೃದ್ಧಿಸಲು ಜಲಮೂಲಗಳಾದ ಕೆರೆ-ಕಟ್ಟೆಗಳಲ್ಲಿ ನೀರು ನಿಲ್ಲಿಸುವ ಸಾಮರ್ಥ್ಯ ಹೆಚ್ಚಿಸಬೇಕು. ಜಲಸಂಕಷ್ಟ ನೀಗಿಸಬೇಕು. | ಮನೋಹರ ತಹಶೀಲ್ದಾರ ಮಾಜಿ ಸಚಿವ