ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಾನೂನು ವಿದ್ಯಾರ್ಥಿಗಳು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯನ್ನು ಬಹು ಆಯಾಮವಾಗಿ ನೋಡಬೇಕೆ ಹೊರತು ಏಕಮುಖವಾಗಿ ಅಲ್ಲ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಆಶಿತ್ ಮೋಹನ ಪ್ರಸಾದ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಮತ್ತು ಗೌಪ್ಯತೆಯ ಹಕ್ಕಿನ ನಡುವೆ ಸಮಾನತೆ ಮತ್ತು ಸಮತೋಲನದೊಂದಿಗೆ ನ್ಯಾಯವು ದೊರಕುವಂತಾಗಬೇಕು. ಇವು ಪರಸ್ಪರ ಅಂತರ ಸಂಬಂಧವನ್ನು ಹೊಂದಿದ್ದು ನಾವು ಮಾಹಿತಿ ಹಕ್ಕು ಕಾಯ್ದೆಯನ್ನು ಸಾಮಾಜಿಕ ತತ್ವಜ್ಞಾನಿಯ ದೃಷ್ಟಿಕೋನದಲ್ಲಿ ನೋಡಬೇಕು ಎಂದರು.
ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ಹೊರಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಈ ಕಾಯ್ದೆಯು ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸುವ ಮೂಲಕ ಜನರ ಮೂಲಭೂತ ಹಕ್ಕನ್ನು ಖಾತ್ರಿಗೊಳಿಸುತ್ತದೆ. ಅನುಷ್ಠಾನಕ್ಕೆ ತಂದ ಸಂದರ್ಭದಲ್ಲಿ ಹಲವಾರು ಟೀಕೆಗಳು ಕೇಳಿ ಬಂದಿರುವುದಾದರೂ ಈ ಕಾಯ್ದೆಯಲ್ಲಿ ಹಲವಾರು ಉತ್ತಮ ಅಂಶಗಳಿವೆ. ಹಾಗಾಗಿ ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಯ್ದೆಯಡಿ ಕೇಳಬಹುದಾದ ಮಾಹಿತಿಗಳು, ಅರ್ಜಿಗಳನ್ನು ಮಾನ್ಯ ಮಾಡದಿರುವ ಸಂದರ್ಭಗಳು, ಕಾಯ್ದೆಯಲ್ಲಿ ಹೇಳಲಾದ ವಿನಾಯಿತಿಗಳು ಮತ್ತು ಮೇಲ್ಮನವಿಯ ವಿವಿಧ ಹಂತಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಸಹಾಯಕ ಹಿರಿಯ ಪ್ರಾಧ್ಯಾಪಕ ಡಾ. ಜಿ. ಬಿ. ಪಾಟೀಲ ಮಾತನಾಡಿ, ಮಾಹಿತಿಯು ಶಕ್ತಿಯಾಗಿದೆ. ಆದರೆ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಆಯುಕ್ತರ ನೇಮಕಾತಿಯಲ್ಲಿ ಸಮಸ್ಯೆಗಳಿದ್ದರೆ, ಇನ್ನೂ ಹಲವೆಡೆ ಈ ಕಾಯ್ದೆಯನ್ನು ಅನಪೇಕ್ಷಿತ ಮಾಹಿತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಈ ಕಾಯ್ದೆಯ ಮಹತ್ವವು ಕ್ಷೀಣಿಸುತ್ತಿದೆ. ಇದನ್ನು ತಪ್ಪಿಸಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕಿದೆ ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿ ತರುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ವಿವಿ ಯ ಕಾನೂನು ಶಾಲೆಯ ನಿರ್ದೇಶಕಿ ಡಾ. ರತ್ನಾ ಭರಮಗೌಡರ್, ಹಣಕಾಸು ಅಧಿಕಾರಿ ಸಂಜೀವಕುಮಾರ್ ಸಿಂಗ್ ಇದ್ದರು.ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕಿ ಡಾ. ಅರ್ಚನಾ ಕೆ. ಮತ್ತು ಶೋಭಾ ಹೂಗಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ್ಲೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.