ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡಲಾಗಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳುವುದಾಗಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಕ್ಷೇತ್ರದ ಪುಟ್ಟೇನಹಳ್ಳಿ,ಜರಗನಹಳ್ಳಿ ವಾರ್ಡ್‌ನಲ್ಲಿರುವ ಸತ್ಯಗಣಪತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ‘ಜನ ಸ್ಪಂದನ’ಸಭೆಯಲ್ಲಿ ಸಮಸ್ಯೆಗಳ ಕುರಿತು ಅಹವಾಲು ಆಲಿಸಿ ಮಾತನಾಡಿದರು.
ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಈ ಸಭೆ ಸಹಕಾರಿ. ಜನರು ತಮ್ಮ ದೈನಂದಿನ ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ಸಂಬಂಧಪಟ್ಟ ಅಧಿಕಾರಿಗಳು ತಪ್ಪಿಸಬೇಕು. ಜನರ ಮನೆ ಬಾಗಿಲಿಗೆ ಸೇವೆ ಸಲ್ಲಿಸಲು ಅಧಿಕಾರಿಗಳು ಮುಂದಾಗಬೇಕು. ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಇನ್ನಷ್ಟು ಪ್ರಮಾಣಿಕ ಕೆಲಸ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಶಾಸಕರು ಪರಿಹಾರ ನೀಡಿದರು. ಬಿಬಿಎಂಪಿ ಮಾಜಿ ಉಪಮೇಯರ್ ರಾಮ್ ಮೋಹನ್ ರಾಜು, ಮಾಜಿ ಸದಸ್ಯ ರಮೇಶ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.