ಜಿಲ್ಲೆ

ಸತತ 3ನೇ ವರ್ಷವೂ ಮರಿ ಪಡೆದ ಉದ್ದಕೊಕ್ಕಿನ ರಣ ಹದ್ದು

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಅಳಿವಿನಂಚಿನಲ್ಲಿರುವ ಉದ್ದ ಕೊಕ್ಕಿನ ಮತ್ತೊಂದು ರಣಹದ್ದು ಜೋಡಿ ಸತತ ಮೂರನೇ ವರ್ಷ ಮರಿಯೊಂದಕ್ಕೆ ಜನ್ಮ ನೀಡುವ ಮೂಲಕ ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ವನ್ಯ ಧಾಮದಲ್ಲಿ ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಉದ್ದ ಕೊಕ್ಕಿನ ರಣಹದ್ದುಗಳು. ಈಗ ಕೇವಲ ನಾಲ್ಕರಿಂದ ಐದರ ಸಂಖ್ಯೆಗೆ ಬಂದು ತಲುಪಿವೆೆ. ಇದರ ಜತೆಗೆ, ಕೆಲವು ವರ್ಷಗಳ ಕಾಲ ಮರಿಯನ್ನೇ ಮಾಡದ ಕಾರಣ ಸಂತತಿಯ ಉಳಿವಿನ ಬಗ್ಗೆ ಆತಂಕವೂ ಎದುರಾಗಿತ್ತು. ಆದರೆ ಸತತ ಮೂರನೇ ವರ್ಷವೂ ಮರಿಯೊಂದು ಜನ್ಮ ನೀಡಿದೆ.

ವರ್ಷಕ್ಕೆ ಒಂದೇ ಮೊಟ್ಟೆ

ರಣಹದ್ದುಗಳು ವರ್ಷಕ್ಕೆ ಒಂದೇ ಮೊಟ್ಟ ಇಟ್ಟು ಮರಿ ಮಾಡುತ್ತವೆ. ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಮೊಟ್ಟೆ ಇಟ್ಟು ಮರಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಮೊಟ್ಟೆಯಿಟ್ಟ ಸುಮಾರು 55-60 ದಿನಗಳಿಗೆ ಮೊಟ್ಟೆಯೊಡೆದು ಮರಿ ಆಚೆ ಬರುತ್ತದೆ. ಇದೀಗ ರಾಮದೇವರ ಬೆಟ್ಟದಲ್ಲಿ ಜೋಡಿ ರಣಹದ್ದು ಮರಿಗೆ ಜನ್ಮ ನೀಡಿದ್ದು ಸುರಕ್ಷಿತವಾಗಿದೆ. ಪರಿಸರ ಸ್ನೇಹಿಯಾದ ಉದ್ದ ಕೊಕ್ಕಿನ ರಣಹದ್ದು ಸಂತತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಬಂದಿದ್ದು, ಸಾವಿರಾರು ಸಂಖ್ಯೆಯಲ್ಲಿದ್ದ ಇವು ಈಗ ಬೆರಳೆಣಿಕೆಯಷ್ಟಾಗಿವೆೆ. ಇದೀಗ ಮತ್ತೊಂದು ಮರಿಗೆ ಜನ್ಮ ನೀಡಿರುವುದು ಪಕ್ಷಿಪ್ರಿಯರಿಗೆ ಸಂತಸ ತಂದಿದೆ.

ಅಪರೂಪದ ಘಟನೆ

ರಣಹದ್ದು ಮರಿ ಮಾಡುವುದು ಅಪರೂಪದ ಘಟನೆ ಎನ್ನುವಂತೆ ಆಗಿದೆ. ರಾಮದೇವರ ಬೆಟ್ಟದಲ್ಲಿ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ರಣಹದ್ದುಗಳು ಇದ್ದವು ಎನ್ನುವುದು ಹಿರಿಯರ ಮಾತು. ಕಾಲ ಕಳೆದಂತೆ ಇವುಗಳ ಸಂತತಿ ಕ್ಷೀಣಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಪ್ರಕ್ರಿಯೆಯೂ ಅಪರೂಪ ಎನ್ನುವಂತಾಗಿತ್ತು. 2015-16ರಲ್ಲಿ ಜೋಡಿಯೊಂದು ಮರಿ ಮಾಡಿತ್ತು ಎನ್ನುವುದು ಬಿಟ್ಟರೆ. ಅಂದಿನಿಂದ ಪ್ರತಿ ವರ್ಷ ಮೊಟ್ಟೆ ಇಟ್ಟರೂ ವಿವಿಧ ಕಾರಣಗಳಿಗಾಗಿ ಮರಿ ಮಾಡುವುದರಲ್ಲಿ ವಿಲವಾಗಿದ್ದವು. ಸತತ 5 ವರ್ಷಗಳ ನಂತರ ಕಳೆದ 2021-22ನೇ ಸಾಲಿನಿಂದಲೂ ಸತತವಾಗಿ ಮರಿಗೆ ಜನ್ಮ ನೀಡುತ್ತಲೇ ಇರುವುದು ಸಂತತಿ ವೃದ್ಧಿಗೆ ಪೂರಕವಾಗಿದೆ.

ಜಟಾಯು ಎಂಬ ಪ್ರತೀತಿ

ಈಗ ಎಲ್ಲೆಡೆ ರಾಮನಾಮದ ಜಪ. ರಾಮನಗರದ ರಾಮ ದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇವೆ. ಈ ಚರ್ಚೆಗಳ ನಡುವೆಯೇ ಉದ್ದ ಕೊಕ್ಕಿನ ರಣಹದ್ದುಗಳು ಜಟಾಯುವಿನ ಪ್ರತಿರೂಪ ಎನ್ನುವ ಚರ್ಚೆಗಳು ಆರಂಭಗೊಂಡಿವೆ. ಒಂದೆಡೆ ವನ್ಯಜೀವಿ ಧಾಮವನ್ನು ಉಳಿಸಿಕೊಳ್ಳುವ ಜತೆಗೆ, ಜಟಾಯುವಿನ ಪ್ರತಿ ರೂಪದಂತಿರುವ ರಣಹದ್ದುಗಳ ಸಂತತಿ ವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.

ಸತತ ಮೂರನೇ ವರ್ಷ ಜೋಡಿಯೊಂದು ಮರಿಗೆ ಜನ್ಮ ನೀಡಿರುವುದು ಸಂತಸದ ವಿಚಾರ. ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಅರಣ್ಯ ಇಲಾಖೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ಪ್ರಸ್ತುತ 4-5 ಸಂಖ್ಯೆಯಲ್ಲಷ್ಟೇ ಇರುವ ರಣಹದ್ದುಗಳ ಸಂಖ್ಯೆ ಹೆಚ್ಚಲು ಸಾಧ್ಯವಾಗುತ್ತದೆ. ಈ ಪ್ರದೇಶವನ್ನು ಮತ್ತಷ್ಟು ರಣಹದ್ದು ಸ್ನೇಹಿ ತಾಣವನ್ನಾಗಿ ಮಾಡುವ ಮೂಲಕ ಅವುಗಳ ರಕ್ಷಣೆ ಮಾಡಬೇಕಿದೆ. ಬಿ.ಶಶಿಕುಮಾರ್, ಕಾರ್ಯದರ್ಶಿ,ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ಮೂರನೇ ವರ್ಷ ಹದ್ದಿನ ಮರಿ ಜನ್ಮ ಪಡೆದುಕೊಂಡಿರುವುದು ಆಶಾದಾಯಕ ಬೆಳವಣಿಗೆ. ರಣಹದ್ದುಗಳಿಗೆ ತೊಂದರೆ ಆಗದಂತೆ ಕ್ರಮವಹಿಸಲು ಈಗಾಗಲೇ ಹವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಟ್ಟಕ್ಕೆ ಪ್ರವೇಶ ಪಡೆಯಲು ಬದಲಿ ಮಾರ್ಗಕ್ಕಾಗಿ ಪ್ರಯತ್ನ ಮಾಡಲಾಗುತ್ತಿದೆ.ರಾಮಕೃಷ್ಣಪ್ಪ. ಡಿಸಿಎಫ್, ಪ್ರಾದೇಶಿಕ ವಿಭಾಗ, ರಾಮನಗರ