ಜಿಲ್ಲೆ

ಲಂಡನ್​ ಮಾದರಿಯಲ್ಲಿ ಉದ್ಯಾನವನ

* ಅರ್ಕಾವತಿ ನದಿ ಎಡ ಬಲದಲ್ಲಿ ನಿರ್ಮಾಣ

ರಾಮನಗರ

ಅರ್ಕಾವತಿ ನದಿ ಎಡ ಬಲದಲ್ಲಿ 167 ಕೋಟಿ ರೂ. ವೆಚ್ಚದಲ್ಲಿ ಲಂಡನ್​ ಮಾದರಿಯಲ್ಲಿ ವಾಯು ವಿಹಾರ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​ ತಿಳಿಸಿದರು.

ರಾಮನಗರದ ಅಂಬೇಡ್ಕರ್​ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಕೋಳಿ ತ್ಯಾಜ್ಯ ಮತ್ತಿತರ ಕಸ ಅರ್ಕಾವತಿ ನದಿಗೆ ಸುರಿಯಲಾಗುತ್ತಿದ್ದು, ಅಂತಹವರ ವಿರುದ್ಧ ಮುಲಾಜಿಲ್ಲದೆ ಅಧಿಕಾರಿಗಳು ಕ್ರಮ ವಹಿಸಬೇಕು. ಸಿಸಿ ಕ್ಯಾಮರಾ ಹಾಕಿ ಕಸ ಸುರಿದವರ ವಿರುದ್ಧ ಕ್ರಮ ಆಗಬೇಕು. ಪೌರ ಕಾರ್ಮಿಕರೇ ಸ್ವಚ್ಛತೆ ಮಾಡಬೇಕು ಎಂಬ ಧೋರಣೆ ಸರಿಯಲ್ಲ. ಜನರು ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದರು.

ಪೌರ ಕಾರ್ಮಿಕರನ್ನು ಪೂಜ್ಯ ಭಾವನೆಯಿಂದ ಕಾಣಬೇಕಿದೆ. ಪೌರಕಾರ್ಮಿಕರನ್ನು ಕಾಂಗ್ರೆಸ್​ ಸರ್ಕಾರ ಕಾಯಂ ಮಾಡಿತು. ಹಿಂದಿನ ಯಾವ ಸರ್ಕಾರವೂ ನಿಮ್ಮ ಕಡೆ ಗಮನ ಹರಿಸಿರಲಿಲ್ಲ ಎಂದ ಅವರು, ವಿಶ್ರಾಂತಿ ಪಡೆಯಲು ತಂಗುದಾಣ ವ್ಯವಸ್ಥೆ ಮಾಡಲಾಗುವುದು. ನಿಮಗೆ ನಿವೇಶನ, ಮನೆ ಕಲ್ಪಿಸಲು ಶ್ರಮಿಸುತ್ತೇನೆ. 80 ಎಕರೆ ಜಾಗ ಗುರುತಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ 100 ಕೋಟಿ ರೂ. ನೀಡಿದ್ದು, ಶ್ರೀದಲ್ಲೇ ರಸ್ತೆ, ಚರಂಡಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ನಿವೇಶನ ಕೋರಿ 13 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ 8,880 ಅರ್ಜಿ ಅಂತಿಮಗೊಳಿಸಿದ್ದೇವೆ. 3 ತಿಂಗಳಲ್ಲಿ 3 ಸಾವಿರ ನಿವೇಶನ ಕೊಡುತ್ತೇವೆ. ಪೌರ ಕಾರ್ಮಿಕರಿಗೆ ಜಾಗ ಗುರುತಿಸಿ ನಿವೇಶನ ನೀಡಲಾಗುತ್ತದೆ. ನಿಮ್ಮ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್​ ಕಾರ್ಡ್​ ಬಳಸಿಕೊಳ್ಳಿ ಎಂದು ತಿಳಿಸಿದರು.

ನಗರಸಭಾ ಸದಸ್ಯ ಕೆ. ಶೇಷಾದ್ರಿ ಮಾತನಾಡಿ, ಜನರು ಆರೋಗ್ಯಕರ ಜೀವನ ನಡೆಸಲು ಹಾಗೂ ನಗರ ಸ್ವಚ್ಛ ವಾಗಿರಲು ಪೌರಕಾರ್ಮಿಕರ ದಕ್ಷತೆ ಮುಖ್ಯ. ಸಮಾಜ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಅನೇಕ ರೋಗ ರುಜಿನುಗಳಿಗೆ ತುತ್ತಾಗುತ್ತಿದ್ದಾರೆ. ಪೌರಕಾರ್ಮಿಕರ ಬಗ್ಗೆ ಮತ್ತಷ್ಟು ಕಾಳಜಿ ವಹಿಸಬೇಕು ಎಂದರು.

ಜಿಲ್ಲಾಧಿಕಾರಿಗಳು, ಶಾಸಕರು ಜಾಗ ಗುರುತಿಸಿ ನಿವೇಶನ, ಸೂರು ಕಲ್ಪಿಸಬೇಕು. ನಗರ ನೆಮ್ಮದಿಯಾಗಿ ಇರಬೇಕಾದರೆ ಪೌರಕಾರ್ಮಿಕರೂ ನೆಮ್ಮದಿಯಾಗಿ ಇರಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅವರ ನೆರವಿಗೆ ನಿಲ್ಲಬೇಕು ಎಂದರು.

ಮಾಜಿ ಶಾಸಕ ಕೆ. ರಾಜು, ಪೌರ ಕಾರ್ಮಿಕರ ಸಂದ ರಾಜ್ಯಾಧ್ಯಕ್ಷ ನಾಗಣ್ಣಗೌಡ, ಪೌರ ಸೇವಾ ನೌಕರರ ಸಂದ ರಾಜ್ಯ ಉಪಾಧ್ಯಕ್ಷ ಆರ್​. ನಾಗರಾಜು ಮಾತನಾಡಿದರು. ಉತ್ತಮ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್​. ರಾಜು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರಸ್ವಾಮಿ, ನಗರಸಭಾ ಸದಸ್ಯರಾದ ವಿಜಯಕುಮಾರಿ, ಮಂಜುನಾಥ್​, ಪಾರ್ವತಮ್ಮ, ಮಂಜುಳಾ ವೆಂಕಟೇಶ್​, ಮಹಾಲಕ್ಷ್ಮೀ , ಸೋಮಶೇಖರ್​, ಅಜ್ಮತ್​, ಮುತ್ತುರಾಜ್​, ಪವಿತ್ರಾ, ಆಯಿಷಾ, ಜಯಲಕ್ಷ್ಮಮ್ಮ , ನಿಜಾಮುದ್ದೀನ್​ ನಗರಸಭಾ ಅಧಿಕಾರಿಗಳಾದ ಸುಬ್ರಹ್ಮಣಿ, ಶಿವಣ್ಣ, ರೇಖಾ, ವಿಜಯಕುಮಾರ್​, ನಟರಾಜೇಗೌಡ ಮುಂತಾದವರಿದ್ದರು.