ಹನೂರು: ಗ್ರಾಮ ಪಂಚಾಯಿತಿಯ ಸಾಧನೆಯನ್ನು ಪರಿಗಣಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ 4ನೇ ಬಾರಿಗೆ ಆಯ್ಕೆಯಾಗಿದ್ದು, ಅ. 2ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.
2015-16, 2016-17 ಹಾಗೂ 2018-19ನೇ ಸಾಲಿನಲ್ಲಿ ಲೊಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಂದಾಯ ವಸೂಲಾತಿ, ಆರ್ಥಿಕ ಪ್ರಗತಿ, ವಾರ್ಡ್‌ಸಭೆ, ಸಾಮಾನ್ಯ ಸಭೆ, ಗ್ರಾಮಸಭೆ, ನರೇಗಾ ಮತ್ತು ವಸತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದ ಹಿನ್ನೆಲೆಯಲ್ಲಿ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿತ್ತು. ಅಂತೆಯೆ, ಇದೀಗ 2022-23ನೇ ಸಾಲಿನಲ್ಲೂ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಗತಿ ಸೂಚ್ಯಂಕ, ಕಂದಾಯ ವಸೂಲಾತಿ, ಸರ್ಕಾರಿ ಯೋಜನೆಗಳ ಅನುಷ್ಠಾನ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಹಣಕಾಸು ವ್ಯವಹಾರ ಇನ್ನಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಒಳಗೊಂಡ 300 ಅಂಕಗಳ ಪ್ರಶ್ನಾವಳಿಗೆ ಪಂಚತಂತ್ರದಿಂದ ಉತ್ತರಿಸುವ ಮೂಲಕ ಗ್ರಾಪಂಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ, ಲೊಕ್ಕನಹಳ್ಳಿ ಗ್ರಾಪಂ ಅರ್ಜಿ ಸಲ್ಲಿಸಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾರ್ಗಸೂಚಿ ಪ್ರಕಾರ ಪರಿಶೀಲಿಸಿದಾಗ ಕೈಗೊಂಡ ಕಾರ್ಯಗಳು ಅಭಿವೃದ್ಧಿಗೆ ಪೂರಕವಾಗಿತ್ತು. ಈ ಹಿನ್ನೆಲೆಯಲ್ಲಿ ಲೊಕ್ಕನಹಳ್ಳಿ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ 4ನೇ ಬಾರಿಗೆ ಆಯ್ಕೆಯಾಗಿದ್ದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅ.2ರಂದು ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪ್ರಗತಿ ಸಾಧನೆ: ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುತ್ತುಗೋಡೆ, ಶಾಲಾ ಆಟದ ಮೈದಾನ, ಅಡುಗೆ ಕೋಣೆ, ಕಾಂಪೌಂಡ್ ನಿರ್ಮಾಣ, ಕಚ್ಚಾರಸ್ತೆ, ಕೆರೆ ಅಭಿವೃದ್ಧಿ, ಕೊಟ್ಟಿಗೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಗತಿ ಸಾಧಿಸಿತ್ತಲ್ಲದೆ, ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯ ವತಿಯಿಂದ ರಾಷ್ಟ್ರೀಯ ಜೀವನೋಪಾಯ ಕಟ್ಟಡ ನಿರ್ಮಾಣ ಹಾಗೂ ಅಮೃತ ಗ್ರಾಪಂ ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಇದರ ಜತೆಗೆ, ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಪುರಸ್ಕಾರಕ್ಕೆ ಭಾಜನವಾಗಿದೆ.