ಕೇರಳದ ಕ್ಯಾಲಿಕಟ್‌ನಲ್ಲಿ ಆಯೋಜನೆಗೊಂಡಿರುವ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಮೈಸೂರು ವಿಶ್ವವಿದ್ಯಾಲಯದ ಮಹಿಳಾ ತಂಡದೊಂದಿಗೆ ಕೋಚ್ ಲೋಕೇಶ್. 
ಜಿಲ್ಲೆ

ನೆಟ್‌ಬಾಲ್ ತರಬೇತುದಾರರಾಗಿ ಲೋಕೇಶ್ ನೇಮಕ

ಎಂ.ರವಿ

ಹುಣಸೂರು: ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಮೇ 4ರಿಂದ ಆಯೋಜನೆಗೊಂಡಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ನೆಟ್‌ಬಲ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ಮಹಿಳಾ ತಂಡದ ತರಬೇತುದಾರರಾಗಿ ಶಾಲಾ ಶಿಕ್ಷಣ ಇಲಾಖೆಯ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್ ನೇಮಕಗೊಂಡಿದ್ದರೆ, ತಾಲೂಕಿನ ಗಾವಡಗೆರೆ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿನಿ ಪ್ರಸ್ತುತ ಮೈಸೂರು ಮಹಾರಾಣಿ ಕಾಲೇಜಿಲ್ಲಿ ವ್ಯಾಸಂಗ ಮಾಡುತ್ತಿರುವ ಜಿ.ಸ್ವಾತಿ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ವಿಶೇಷವೆಂದರೆ ತಂಡದಲ್ಲಿ ಗಾವಡಗೆರೆ ಶಾಲೆಯಲ್ಲೇ ಶಿಕ್ಷಣ ಪಡೆದು ಹಾಲಿ ಮಹಾರಾಣಿ ಕಾಲೇಜಿನಲ್ಲಿ ಓದುತ್ತಿರುವ ಕ್ರೀಡಾಪಟುಗಳಾದ ಕೆ.ಪವಿತ್ರಾ, ಎಂ.ಮೇಘನಾ, ಹರ್ಷಿತಾ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರೊಂದಿಗೆ ಮಹಾರಾಣಿ ಕಾಲೇಜಿನ ಎಂ.ಎಸ್.ಐಶ್ವರ್ಯಾ, ಎಂ.ಯಶಸ್ವಿನಿ, ಬಿ.ರಂಜಿತಾ, ಎನ್.ಅಮೃತಾ, ಎಲ್ ಸುಚಿತ್ರಾ ಮತ್ತು ಕೆ.ಪ್ರೀತಿ, ಬೆಳಗೊಳ ಡಿ.ಪಾಲ್ ಕಾಲೇಜಿನ ಪಲಿ ಬೋಜಮ್ಮ, ಮೈಸೂರಿನ ಶಿವಲೀಲಾ ತಂಡ ಸಹ ಆಟಗಾರ್ತಿಯರಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ನೆಟ್‌ಬಾಲ್ ಅಂತರರಾಜ್ಯ, ಅಂತರ ವಿಶ್ವವಿದ್ಯಾಲಯದ ಪಂದ್ಯಾವಳಿಗೆ ಇದೇ ಮೊದಲ ಬಾರಿಗೆ ಮೈಸೂರು ವಿವಿ ಪ್ರವೇಶಿಸುತ್ತಿದೆ ಎಂದು ತಾಲೂಕು ದೈಹಿಕ ಪರಿವೀಕ್ಷಕ ಲೋಕೇಶ್ ಮಾಹಿತಿ ನೀಡಿದ್ದಾರೆ.