ಮಂಗಳೂರು: ಬೈಕಂಪಾಡಿಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಮತ್ತು ಡಿವೈಎಸ್ಪಿ ಚೆಲುವರಾಜು ನೇತೃತ್ವದಲ್ಲಿ ದಾಳಿ ನಡೆದಿದ್ದು ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಫೈಲ್ ಗಳನ್ನು ಕ್ಲೀಯರ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಣ್ಣ ಪುಟ್ಟ ಕೈಗಾರಿಕೆಗಳ ಲೈಸನ್ಸ್ ನವೀಕರಣ ಮಾಡುವುದಕ್ಕೂ ಅಧಿಕಾರಿಗಳು ಡಿಮಾಂಡ್ ಇಟ್ಟಿರುವ ಬಗ್ಗೆ ದೂರು ಬಂದಿದ್ದರಿಂದ ಲೋಕಾಯುಕ್ತ ದಾಳಿ ನಡೆದಿದೆ.
ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿ, ಕಡತಗಳ ಪರಿಶೀಲನೆ ನಡೆಸಿದ್ದಾರೆ. ಕೈಗಾರಿಕೆಗಳ ಸಂಬಂಧಪಟ್ಟ ಕಡತಗಳನ್ನು ವಿನಾಕಾರಣ ಬಾಕಿ ಇಡಲಾಗಿದೆಯೇ ಎಂದು ತಪಾಸಣೆ ನಡೆಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದೆ, ಸಣ್ಣ ಪುಟ್ಟ ಕೈಗಾರಿಕೆಗಳಿಂದಲೂ ಹಣಕ್ಕಾಗಿ ಡಿಮ್ಯಾಂಡ್ ಮಾಡುವುದು, ಹಣ ಪಡೆದು ಮಾಲಿನ್ಯವನ್ನು ಸಾರ್ವಜನಿಕ ಪ್ರದೇಶಕ್ಕೆ ಹರಿಸಲು ಅವಕಾಶ ಕೊಡುವುದು ಇತ್ಯಾದಿ ಆರೋಪಗಳಿದ್ದವು.