ಔರಾದ್: ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೇವೆ ಮತ್ತು ಸೌಲಭ್ಯ ಒದಗಿಸುತ್ತಿದ್ದು, ರಾಜ್ಯದ ಇತರೆ ಆಸ್ಪತ್ರೆಗೆ ಮಾದರಿಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಪ್ರದೀಪ ಕೊಳ್ಳಾ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಅವರಿಂದ ಮಾಹಿತಿ ಪಡೆದರು. ಆಸ್ಪತ್ರೆ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣೆ ಪರಿಶೀಲಸಿ, ರೋಗಿಗಳನ್ನು ಮಾತನಾಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆವರಣದಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಪ್ರದೇಶ, ಹಸಿರು ವಾತಾವರಣ ಸೃಷ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿಶಾಲ ಕೊಠಡಿ, ಸ್ವಚ್ಛ ಆವರಣ, ಹಸಿರು ಗಿಡಗಳು, ರಸ್ತೆ, ಕುಡಿಯುವ ನೀರು, ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಹೆರಿಗೆ, ಅಪಘಾತಗಳಿಗೆ ವೈದ್ಯಕೀಯ ಚಿಕಿತ್ಸೆ, ಪ್ರತಿ ಸೋಮವಾರ ಮತ್ತು ಶುಕ್ರವಾರ ಗೃಹಿಣಿಯರಿಗೆ ಶಸ್ತç ಚಿಕಿತ್ಸೆ, ರಾತ್ರಿಯೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಲೋಕಾಯುಕ್ತ ಆಧಿಕಾರಿಗಳಿಗೆ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೆ ಮೂರು ಸಾವಿರಕ್ಕೂ ಅಧಿಕ ಶಸ್ತç ಚಿಕಿತ್ಸೆ ನಡೆದಿದೆ ಎಂದು ಡಾ.ಗಾಯತ್ರಿ ತಿಳಿಸಿದರು. ಲೋಕಾಯುಕ್ತ ಪೇದೆ ಶುಕ್ಲೋಧನ, ಹಾತಿಸಿಂಗ್, ಡಾ.ಶಿವಕುಮಾರ, ಡಾ.ಪ್ರಿಯಾಂಕಾ, ಡಾ.ರಾಹುಲ್, ಸಿಬ್ಬಂದಿ ಮರಿಯಮ್ಮ, ರೇಣುಕಾ ಇತರರಿದ್ದರು.