ಬೆಳ್ತಂಗಡಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ಭೇಟಿ ಪರಿಶೀಲಿಸಿದರು. ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ ಸಿ.ಎಲ್., ಚಂದ್ರಶೇಖರ ಕೆ.ಎನ್., ಅಮಾನುಲ್ಲಾ ಮೊದಲಾದವರಿದ್ದರು. 
ಜಿಲ್ಲೆ

ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಭೇಟಿ :ಶೇ.100 ಫಲಿತಾಂಶ ಪಡೆದದ್ದಕ್ಕೆ ಅಭಿನಂದನೆ ಸೌಲಭ್ಯ ಕಲ್ಪಿಸಲು ಸೂಚನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಪದವಿಪೂರ್ವ ಕಾಲೇಜು ಸಮೀಪದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭೇಟಿ ನೀಡಿ ವಸತಿ ನಿಲಯದ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು.

ಮಳೆಗಾಲದ ಸಂದರ್ಭ ಮಕ್ಕಳಿಗೆ ಬಿಸಿ ನೀರು ಕೊಡಬೇಕು. ಅನಾರೋಗ್ಯ ಉಂಟಾದರೆ ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳ ಕಾಳಜಿ ವಿಚಾರದಲ್ಲಿ ನಿರ್ಲಕ್ಷೃ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಸಿದರು.

ಶೇ.100 ಫಲಿತಾಂಶ ಪಡೆದ ವಸತಿ ನಿಲಯ ಹಾಗೂ ವಿದ್ಯಾರ್ಥಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪ್ರಶಂಸಿಸಿದರು.

ವಸತಿ ನಿಲಯದ ಕಾರ್ಯವೈಖರಿ ಕುರಿತು ವಸತಿ ನಿಲಯದ ಅಧಿಕಾರಿ ಜೋಸೆಫ್ ಮಾಹಿತಿ ನೀಡಿದ್ದು, ನಿಲಯದಲ್ಲಿ ಸ್ಥಳದ ಅಭಾವವಿದೆ. ಇಲ್ಲಿ 125 ಮಕ್ಕಳ ದಾಖಲಾತಿಗೆ ಅವಕಾಶವಿದ್ದು, 110 ಮಕ್ಕಳ ದಾಖಲಾತಿ ಇದೆ. ದಾಖಲಾತಿ ಸಂಖ್ಯೆ ಕಡಿಮೆಗೊಳಿಸಿದರೆ ಅನುಕೂಲವಾಗಲಿದೆ. ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಗಸ್ತು ನಡೆಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ವಸತಿ ನಿಲಯದ ಅಧಿಕಾರಿಗಳು ಸಮಸ್ಯೆಗಳ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದು, ಸರ್ಕಾರ ವಸತಿ ನಿಲಯ ಮಂಜೂರುಗೊಳಿಸಿದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರದೇಶದಲ್ಲಿ ನಿವೇಶನ ದೊರೆಯುತ್ತಿಲ್ಲ. ದೂರದ ಪ್ರದೇಶದಲ್ಲಿ ವಸತಿ ನಿಲಯ ನಿರ್ಮಿಸಿದರೆ ಮಕ್ಕಳಿಗೆ ಕಾಲೇಜುಗಳಿಗೆ ತೆರಳಲು ಕಷ್ಟವಾಗುತ್ತದೆ ಎಂದರು. ಇದರ ಕುರಿತು ಗಮನ ಹರಿಸುವುದಾಗಿ ಲೋಕಾಯುಕ್ತ ಅಧಿಕಾರಿಗಳು ಭರವಸೆ ನೀಡಿದರು.

ಲೋಕಾಯುಕ್ತ ಎಸ್.ಪಿ ನಟರಾಜ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ ಸಿ.ಎಲ್., ಚಂದ್ರಶೇಖರ ಕೆ.ಎನ್., ಅಮಾನುಲ್ಲಾ, ಸಿಬ್ಬಂದಿ ವಿನಾಯಕ್, ಮಹೇಶ್, ಪಾಪಣ್ಣ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ನಿಯಮ 26ರ ಅನ್ವಯ ಅಂಗನವಾಡಿ, ವಸತಿ ನಿಲಯಗಳಿಗೆ ದಿಢೀರ್ ಭೇಟಿ ಮಾಡಿ ಪರಿಶೀಲನೆ ಮಾಡಲು ಅಧಿಕಾರವಿದ್ದು, ಈ ಕಾರಣಕ್ಕಾಗಿ ಬೆಳ್ತಂಗಡಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಉತ್ತಮ ವ್ಯವಸ್ತೆಗಳಿವೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೊಂದು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದು, ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. -ಅಮಾನುಲ್ಲಾ, ಲೋಕಾಯುಕ್ತ ಇನ್‌ಸ್ಪೆಕ್ಟರ್ https://www.vijayavani.net/an-alert-somewhere-along-the-coast https://www.vijayavani.net/mangalore-city-police-comissioner-office-road-safty-meeting