ಜಿಲ್ಲೆ

ಪುರಸಭೆಗೆ ಲೋಕಾಯುಕ್ತರ ದಿಢೀರ್ ಭೇಟಿ ... 5 ತಾಸು ಕಡತ ಪರಿಶೀಲನೆ

ಎ. ಆರ್. ರಘುರಾಮ

ಶ್ರೀರಂಗಪಟ್ಟಣ : ಪಟ್ಟಣ ಪುರಸಭೆ ದುರಾಡಳಿತ ಹಾಗೂ ಸಿಬ್ಬಂದಿ ಕರ್ತವ್ಯ ಲೋಪ ಸೇರಿದಂತೆ ವಿವಿಧ ರೀತಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶನಿವಾರ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಲೋಕಾಯುಕ್ತ ಎಸ್ಪಿ ಸುರೇಶ ಬಾಬು ನೇತೃತ್ವದಲ್ಲಿ ಡಿವೈಎಸ್ಪಿ ಸುನೀಲ್ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಜಯರತ್ನ ಹಾಗೂ ಬ್ಯಾಟರಾಯಗೌಡ ಸೇರಿದಂತೆ ಇನ್ನಿತರ ಸಿಬ್ಬಂದಿ 5 ತಾಸಿಗೂ ಹೆಚ್ಚು ಕಾಲ ಪುರಸಭೆ ಕಾರ್ಯಲಯದ ವಿವಿಧ ವಿಭಾಗಗಳಲ್ಲಿದ್ದ ದಾಖಲೆಗಳು, ಸಕಾಲದಲ್ಲಿ ವಿಲೇವಾರಿಯಾಗದ ಸಾರ್ವ ಜನಿಕರ ಅರ್ಜಿ ಇತ್ಯಾದಿ ಕಡತಗಳನ್ನು ತಪಾಸಣೆ ಮಾಡಿದರು. ಜನರ ಕೆಲಸಗಳು ತಡವಾಗಲು ಕಾರಣ ಕೇಳಿ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ಪ್ರಶ್ನಿಸಿ ಮಾಹಿತಿ ಪಡೆದರು. ನಡೆದಿರುವ ಲೋಪಗಳ ಕುರಿತು ಲೋಕಾಯುಕ್ತ ಇಲಾಖೆಗೆ ವರದಿ ನೀಡಲು ಪಟ್ಟಿ ಸಿದ್ಧಪಡಿಸಿದರು.

ಕರ್ತವ್ಯ ಲೋಪದ ಬಗ್ಗೆ ಆರೋಪ: ಲೋಕಾಯುಕ್ತ ಎಸ್ಪಿ ಸುರೇಶ ಬಾಬು ಈ ಸಂದರ್ಭ ಮಾತನಾಡಿ, ಪಟ್ಟಣದ ಪುರಸಭೆಯ ವಿರುದ್ಧ ಸಾಕಷ್ಟು ದೂರು ಬಂದಿವೆ. ಮಂದಗತಿಯ ಆಡಳಿತ ಹಾಗೂ ಕೆಲ ನೌಕರರ ಕರ್ತವ್ಯ ಲೋಪದ ಬಗ್ಗೆ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಇ-ಸ್ವತ್ತು ಮಾಡಲು, ನಿವೇಶನಗಳ ಖಾತೆ ಮಾಡಲು ಕಡತಗಳನ್ನು ಬಾಕಿ ಇಡುವುದು ಸೇರಿದಂತೆ ರೆವಿನ್ಯೂ ಮತ್ತು ಇತರ ವಿಭಾಗಗಳಲ್ಲಿ ಸಾಕಷ್ಟು ಲೋಪಗಳು ಮೇಲ್ನೋಟಕ್ಕೆ ಪತ್ತೆಯಾಗಿವೆ. ಇವುಗಳನ್ನು ಒಂದು ಪಟ್ಟಿ ಮಾಡಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ವರದಿ ನೀಡಲಾಗುವುದು. ಲೋಪಗಳಿಗೆ ಉತ್ತರಿಸುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ಲೋಪ ಸಾಬೀತಾದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು. ಒಂದು ವರ್ಷದಿಂದ ಕೆಲಸವಾಗದೆ ಕಚೇರಿಗೆ ಅಲೆದಾಡುತ್ತಿದ್ದ 4-5 ಜನರು ಇ-ಸ್ವತ್ತು ಸೇರಿದಂತೆ ಇತರ

ಕೆಲಸಗಳು ಲೋಕಾಯುಕ್ತರ ಎದುರೇ ತ್ವರಿತವಾಗಿ ಪೂರ್ಣಗೊಂಡಿದ್ದು ಅರ್ಜಿದಾರರಿಗೆ ಹರ್ಷ ಮೂಡಿಸಿತು.