ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂತೋಷ ಆನಿಶೆಟ್ಟರ್ ಅವರ ಧಾರವಾಡ ನಿವಾಸದ ಮೇಲೂ ದಾಳಿ ನಡೆದಿದ್ದು, ಬೆಳಗಾವಿಯ ಸುಭಾಷ ನಗರದಲ್ಲಿರುವ ಅಪಾರ್ಟ್ಮೆಂಟ್‌ನ ಮನೆ ಲೋಕಾಯುಕ್ತ ಇನ್ಸ್ಪೆಕ್ಟರ್ ಉಸ್ಮಾನ್ ಆವಟಿ ನೇತೃತ್ವದ ತಂಡ ದಾಳಿ ನಡೆಯಿಸಿ, ಪತ್ತೆಯಾಗಿರುವ ಹಲವು ಮಹತ್ವದ ದಾಖಲೆಗಳನ್ನು ಪರಿಶೀನೆ ಮಾಡಿದ್ದಾರೆ.
ದಿನವೂ ಧಾರವಾಡದಿಂದಲೇ ಹೋಗಿ-ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ಆನಿಶೆಟ್ಟರ್, ವಿಶ್ರಾಂತಿಗೆಂದು ಸುಭಾಷ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಇದೇ ಮನೆಯಲ್ಲಿದ್ದುಕೊಂಡು ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಇಲ್ಲಿಗೆ ಕರೆಯಿಸಿಕೊಂಡು ಪರಿಶೀಲನೆ ನಡೆಸಿದ ಅಧಿಕಾರಿಗಳು, ಪ್ಲಾೃಟ್‌ನ ಮೂಲೆ ಮೂಲೆ ಬಿಡದೇ ಹುಡುಕಾಡಿದ್ದಾರೆ.
ಕಚೇರಿಯಲ್ಲಿರಬೇಕಾದ ಕೆಲ ದಾಖಲೆಗಳು ಪತ್ತೆಯಾಗಿದ್ದು, ದಾಖಲೆ ಪತ್ರಗಳ ಕುರಿತು ಸಂತೋಷ ಕಡೆಯಿಂದ ಮಾಹಿತಿ ಪಡೆದಿದ್ದಾರೆ. ಜತೆಗೆ ದುಬಾರಿ ಮದ್ಯದ ಬಾಟಲಿ ಹಾಗೂ ಹಲವಾರು ಶೂ ಮತ್ತು ಬೆಲ್ಟ್‌ಗಳೂ ಪತ್ತೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.