ಜಿಲ್ಲೆ

ಲೋಕಾ ಬಲೆಗೆ ಇಬ್ಬರು ಕಂದಾಯ ಅಧಿಕಾರಿಗಳು

ಹರಿಹರ: ಪೆಟ್ರೋಲ್ ಬಂಕ್‌ನ ನಿವೇಶನದ ಕಂದಾಯ ಮೊತ್ತದಲ್ಲಿ ರಿಯಾಯಿತಿ ಮಾಡಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ನಗರದ ನಗರಸಭೆ ಕಂದಾಯ ನಿರೀಕ್ಷಕ ಹಾಗೂ ಕಂದಾಯ ಅಧಿಕಾರಿ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಂದಾಯ ನಿರೀಕ್ಷಕ ನಾಗೇಶ್ ಮತ್ತು ಕಂದಾಯ ಅಧಿಕಾರಿ ಯು. ರಮೇಶ್ ಬಂಧಿತರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ವಾಸಿ ರಾಜು ಲಕ್ಷ್ಮಣ್ ಕಾಂಬ್ಳೆ ಅವರಿಗೆ ಸೇರಿದ ಹರಿಹರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಶ್ರೀದೇವಿ ಪೆಟ್ರೋಲ್ ಬಂಕ್‌ನ ನಿವೇಶನದ ಕಂದಾಯ ಕಡಿಮೆಗೊಳಿಸುವ ಸಲುವಾಗಿ ಆರೋಪಿತರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಬಂಕ್‌ನ 3-4 ವರ್ಷಗಳ ನಗರಸಭೆ ಕಂದಾಯ ಬಾಕಿ ಇತ್ತು. ಸರ್ಕಾರದ ದರದಂತೆ ಪ್ರಸಕ್ತ ಸಾಲಿನ ಕಂದಾಯ ರೂ.1.39.400 ಆಗುತ್ತದೆ. ಹಳೆಯ ಸಾಲಿನ ಕಂದಾಯವೂ ಸೇರಿದಂತೆ ಒಟ್ಟು ಮೊತ್ತದಲ್ಲಿ ಕಂದಾಯ ಮೊತ್ತ ಕಡಿಮೆ ಮಾಡಲು ದೂರುದಾರನಿಗೆ ರೂ.50-60 ಸಾವಿರ ರೂ. ಮೊತ್ತದ ಬೇಡಿಕೆ ಇಡಲಾಗಿತ್ತು.

ಲಂಚದ ಒಟ್ಟು ಮೊತ್ತದಲ್ಲಿ 20 ಸಾವಿರ ರೂ.ಗಳನ್ನು ಶುಕ್ರವಾರ ಮಧ್ಯಾಹ್ನ ಕಂದಾಯ ನಿರೀಕ್ಷಕ ನಾಗೇಶ್ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ನಂತರ ಕಂದಾಯ ಅಧಿಕಾರಿ ಯು. ರಮೇಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕೆ. ಕಲಾವತಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಸಿ. ಮಧುಸೂಧನ್, ಪ್ರಭು ಸೂರಿನ, ಪಿ. ಸರಳಾ, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.