ಜಿಲ್ಲೆ

ಮುಖ್ಯ ಅಭಿಯಂತರ ಮನೆ ಮೇಲೆ ಲೋಕಾ ದಾಳಿ: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಿವೃತ್ತಿ ದಿನವೇ ಸರ್ಕಾರಿ ಅಧಿಕಾರಿಯ ಸರ್ಕಾರಿ ನಿವಾಸ ಹಾಗೂ ಕಚೇರಿ ಮೇಲೆ ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಾಕ್​ ನೀಡಿದ್ದಾರೆ.

ನಗರದ ಲೋಕೋಪಯೋಗಿ ಇಲಾಖೆ (ಉತ್ತರ ವಲಯ) ಮುಖ್ಯ ಅಭಿಯಂತರ ಎಚ್​. ಸುರೇಶ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, 3.31 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನ 4ರವರೆಗೂ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ನಗರದ ಕೆಸಿಡಿ ವೃತ್ತ ಬಳಿಯ ನಿವಾಸ, ಕಚೇರಿ ಜತೆಗೆ ಗದಗ ಮತ್ತು ಬೆಳಗಾವಿ ಜಿಲ್ಲೆಯ ಮನೆ, ಫಾರ್ಮ್ ಹೌಸ್​ನಲ್ಲಿ ಸಹ ಒಂದು ತಂಡ ಶೋಧ ಕಾರ್ಯ ನಡೆಸಿದೆ.

ಮನೆಯಲ್ಲಿ 76,600 ರೂ. ನಗದು, 21,58, 368 ರೂ. ಮೌಲ್ಯದ 245 ಗ್ರಾಂ. ಚಿನ್ನಾಭರಣ, 2,39,958 ರೂ. ಮೌಲ್ಯದ 2.5 ಕೆಜಿ ಬೆಳ್ಳಿ ಆಭರಣಗಳು, 26 ಲಕ್ಷ ರೂ. ಮೌಲ್ಯದ 2 ಕಾರು, 25 ಲಕ್ಷ ರೂ. ಮೌಲ್ಯದ ಪೀಠೋಪಕರಣ ಪತ್ತೆಯಾಗಿದೆ. ಇದರ ಜತೆಗೆ 2.60 ಕೋಟಿ ರೂ. ಮೌಲ್ಯದ ಮನೆ (ಒಂದು ವಾಸದ ಮನೆ, ಒಂದು ಫಾರ್ಮ್ ಹೌಸ್​), 35.36 ಲಕ್ಷ ರೂ. ಮೌಲ್ಯದ 11.35 ಎಕರೆ ಕೃಷಿ ಜಮೀನು, 13.44 ಲಕ್ಷ ರೂ. ಮೌಲ್ಯದ 2 ನಿವೇಶನ, 50.55 ಲಕ್ಷ ರೂ. ಮೌಲ್ಯದ 6 ವಾಣಿಜ್ಯ ಮಳಿಗೆಗಳ ಕಾಗದಪತ್ರ, 1.65 ಕೋಟಿ ರೂ. ಮೊತ್ತದ ಎಫ್ ಡಿ /ಶಿಲ್ಕುಗಳು ಸೇರಿ ಒಟ್ಟು 3.31 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.