ತುಮಕೂರು : ಆದಾಯ ಮೀರಿ ಅಧಿಕ ಸಂಪಾದನೆ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದಾರೆ. ತುಮಕೂರಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರಾಜಶೇಖರ್ ನಿವಾಸ ಸೇರಿದಂತೆ 9 ಕಡೆ ಶೋಧ ಕೈಗೊಂಡಿದ್ದು 5.74 ಕೋ.ರೂ., ಚರ-ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ.
ಎಸ್ಐಟಿ ಬಡಾವಣೆಯ ರಾಜಶೇಖರ್ ನಿವಾಸ, ಬೆಂಗಳೂರು, ತುಮಕೂರಿನಲ್ಲಿರುವ ಸಹೋದರರ ಮನೆಗಳು ಸೇರಿ 9 ಕಡೆ ಏಕಕಾಲದಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷಿ$್ಮನಾರಾಯಣ್ ನೇತೃತ್ವದಲ್ಲಿ ಆದಾಯಕ್ಕು ಮೀರಿ ಸಂಪದಾನೆಯ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಈ ಕಾರ್ಯಾಚರಣೆ ಕೈಗೊಂಡಿದ್ದು 10 ಅಧಿಕಾರಿಗಳು ಈ ತಂಡದಲ್ಲಿದ್ದರು.
12 ನಿವೇಶನ, 4 ವಾಸದ ಮನೆ: ಬೆಳ್ಳಂಬೆಳಗ್ಗೆ ಎಸ್ಐಟಿ ಬಡಾವಣೆಯಲ್ಲಿನ ರಾಜಶೇಖರ್ ನಿವಾಸ ಪ್ರವೇಶಿಸಿದ ಲೋಕಾಯುಕ್ತ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಶೋಧಿಸಿದ್ದು ಈ ವೇಳೆ ಸಿಕ್ಕ ದಾಖಲೆಗಳ ಪ್ರಕಾರ 12 ನಿವೇಶನ, 4 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಸೇರಿ ಒಟ್ಟು 3.89 ಕೋ.ರೂ., ಮೌಲ್ಯದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ.
ಇನ್ನೂ 89 ಲಕ್ಷ ರೂ., ಬೆಲೆಬಾಳುವ ಚಿನ್ನಾಭರಣ, 11.66 ಲಕ್ಷ ನಗದು, 38 ಲಕ್ಷ ರೂ., ಮೌಲ್ಯದ ವಾಹನಗಳು, 26.87 ಲಕ್ಷ ರೂ., ಬೆಲೆಬಾಳುವ ಗೃಹಪಯೋಗಿ ವಸ್ತುಗಳು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 19.11 ಲಕ್ಷ ರೂ., ಸೇರಿ ಒಟ್ಟು 1.84 ಕೋ.ರೂ., ಚರಾಸ್ತಿ ಪತ್ತೆಯಾಗಿದೆ.
ಚರ-ಸ್ಥಿರಾಸ್ತಿಯ ಒಟ್ಟು ಮೌಲ್ಯ 5.74 ಕೋ.ರೂ., ಇದ್ದು ಬೆಳಗಿನಿಂದ ಸಂಜೆವರೆಗೆ ರಾಜಶೇಖರ್ ಹಾಗು ಸಹೋದರರಿಬ್ಬರ ಮನೆಗಳನ್ನು ಲೋಕಾ ಅಧಿಕಾರಿಗಳು ಜಾಲಾಡಿದ್ದು ರಾಜಶೇಖರ್ ಈ ವೇಳೆ ಪ್ರವಾಸದಲ್ಲಿದ್ದರು ಎನ್ನಲಾಗಿದೆ.