ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ನಗರಸಭೆಯ ಪೌರಯುಕ್ತ ಪುಟ್ಟಸ್ವಾಮಿ ಹಾಗೂ ಕಂದಾಯ ಶಾಖೆಯ ಅಧಿಕಾರಿಗಳ ವಿರುದ್ಧ ಅಕ್ರಮ ಖಾತೆ, ನಕಲಿಖಾತೆ, ಭ್ರಷ್ಟಾಚಾರ, ಕೆಲಸಕಾರ್ಯಗಳಲ್ಲಿ ವಿಳಂಭ ಸೇರಿದಂತೆ ಹಲವು ದೂರುಗಳು ಇತ್ತೀಚೆಗೆ ಹೆಚ್ಚಾಗಿದ್ದವು. ಈ ಬಗ್ಗೆ ಲೋಕಾಯುಕ್ತ ಕಚೇರಿಯಲ್ಲೂ ದೂರು ದಾಖಲಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಕಚೇರಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಸಂಜೆವರೆಗೂ ಕಚೇರಿಯಲ್ಲೇ ಬೀಡುಬಿಟ್ಟು ಕಡತ ಪರಿಶೀಲನೆ ನಡೆಸಿದರು. ಜೊತೆಗೆ, ಪೌರಾಯುಕ್ತ ಮತ್ತು ಕೆಲ ಸಿಬ್ಬಂದಿಗಳ ವಿಚಾರಣೆ ಸಹ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಗಳಾದ ಗೌತಮ್, ಸುಧೀರ್ ನೇತೃತ್ವದಲ್ಲಿ ಸಿಪಿಐಗಳಾದ ಸತೀಶ್, ಅನಂತರಾಂ ಸೇರಿದಂತೆ ಹದಿನೈದಕ್ಕೂ ಹೆಚ್ಚಿನ ಸಿಬ್ಬಂದಿಗಳು ನಗರಸಭೆಯ ಪ್ರತಿವಿಭಾಗಗಳನ್ನು ನಿರಂತರವಾಗಿ ಜಾಲಾಡಿದರು. ಪೌರಾಯುಕ್ತರ ಕಚೇರಿ, ಕಂದಾಯ ವಿಭಾಗ, ಕಾಮಗಾರಿ ವಿಭಾಗಗಳಿಗೆ ತೆರಳಿ ಎಲ್ಲಾ ಕಡತಗಳನ್ನು ಪರಿಶೀಲಿಸಿದರು. ಇದರೊಂದಿಗೆ, ಕೆಲ ದೂರುದಾರರ ಸಮ್ಮುಖದಲ್ಲೇ ಅಧಿಕಾರಿಗಳಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದರು. ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಸಹ ವಿಚಾರಿಸಿದರು.