ಜಿಲ್ಲೆ

ಅಧಿಕಾರಿಗಳ ನಿವಾಸದ ಮೇಲೆ ಲೋಕಾ ದಾಳಿ

ಲಲಾಟಾಕ್ಷ ಎಸ್

ಕುಶಾಲನಗರ: ಸೋಮವಾರಪೇಟೆ ತಾಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್) ಸಹಾಯಕ ಇಂಜಿನಿಯರ್ ಎಂ.ಎಂ.ಫಯಾಜ್ ಅಹಮ್ಮದ್ ನಿವಾಸದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್.ಪವನಕುಮಾರ್ ನೇತೃತ್ವದಲ್ಲಿ ಫಯಾಜ್ ಅಹಮ್ಮದ್ ಅವರ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 6 ಕಡೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಶೇ.175 ರಷ್ಟು ಆದಾಯ ಮೀರಿದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎನ್ನಲಾಗಿದೆ. 75 ಲಕ್ಷ ರೂ.ಮೌಲ್ಯದ 2 ಮನೆ, 40 ಲಕ್ಷ ಮೌಲ್ಯದ ರೂ. ಮೌಲ್ಯದ 4 ಎಕರೆ ಕೃಷಿ ಭೂಮಿ, 48,070 ರೂ.ನಗದು, 2,95,800 ರೂ. ಮೌಲ್ಯದ ಚಿನ್ನಾಭರಣ, 24,75,000 ರೂ. ಮೌಲ್ಯದ ವಾಹನಗಳು, ಇತರ 53,81,905 ರೂ.ಸೇರಿದಂತೆ ಒಟ್ಟು 1.69 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.


ಕುಶಾಲನಗರ: ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಜಯಣ್ಣ ಮನೆ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಕುಶಾಲನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಅವರ ಮನೆ ಹಾಗೂ ಪ್ರಸಕ್ತ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಆದಾಯ ಮೀರಿ ಶೇ.140 ಹೆಚ್ಚಿನ ಸಂಪತ್ತು ಪತ್ತೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 9.20 ಲಕ್ಷ ರೂ. ನಗದು, 150 ಗ್ರಾಂ ಚಿನ್ನ, ಕುಶಾಲನಗರ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಒಟ್ಟು 1 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ 3 ಮನೆ, 25 ಲಕ್ಷ ರೂ. ಮೌಲ್ಯದ 3 ಕಾರು, 5 ಲಕ್ಷ ರೂ. ಮೌಲ್ಯದ 2 ನಿವೇಶನ, 3 ಲಕ್ಷ ರೂ. ಮೌಲ್ಯದ 4 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ.