ಜಿಲ್ಲೆ

ಡಿಎಚ್‌ಒ ಕಚೇರಿ, ಮನೆ ಮೇಲೆ ದಾಳಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್‌ಕುಮಾರ್ ಮನೆ ಹಾಗೂ ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಗ್ರಾಮಾಂತರ ಡಿಎಚ್‌ಒ ಸುನೀಲ್‌ಕುಮಾರ್ ವಾಸ್ತವ್ಯದ ಬೆಂಗಳೂರಿನ ಬಸವೇಶ್ವರನಗರದಲ್ಲಿನ ನಿವಾಸದ ಮೇಲೆ ಬೆಳಗ್ಗೆ 6 ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಆರಂಭಿಸಿದ್ದಾರೆ. 8 ಅಧಿಕಾರಿಗಳ ತಂಡ ಮುಂಜಾನೆಯೇ ಡಿಎಚ್‌ಒ ಮನೆಯಲ್ಲಿನ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಇದೇ ವೇಳೆ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿನ ಡಿಎಚ್‌ಒ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ.

2 ಗಂಟೆ ತಡ: ಮುಂಜಾನೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 2 ಗಂಟೆ ಕಾಲ ಡಿಎಚ್‌ಒ ಮನೆ ಪ್ರವೇಶಿಸಲು ತಡವಾಯಿತು ಎನ್ನಲಾಗಿದೆ. ಅಧಿಕಾರಿಗಳು ಬಾಗಿಲು ಬಡಿದರೂ ಒಳಗಡೆಯಿಂದ ಯಾರೂ ಬಾಗಿಲು ತೆರೆಯಲಿಲ್ಲ. ಕಡೆಗೆ ಸುನೀಲ್ ಅವರೇ ಬಾಗಿಲು ತೆರೆದರು ಎನ್ನಲಾಗಿದೆ. ಮಧ್ಯಾಹ್ನದವರೆಗೆ ಮನೆಯಲ್ಲಿ ಬೀಡುಬಿಟ್ಟ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ಡಿಎಚ್‌ಒ ಅವರಿಂದ ಸಂಬಂಧಿಸಿದ ದಾಖಲೆಗಳ ಕುರಿತು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯ 10 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಲ್ಲಿ ಗ್ರಾಮಾಂತರ ಜಿಲ್ಲೆಯ ಆರೋಗ್ಯಾಧಿಕಾರಿಯೂ ಸೇರಿದ್ದಾರೆ.