ಜಿಲ್ಲೆ

ಭ್ರಷ್ಟ ವೈದ್ಯನಿಗೆ "ಲೋಕಾ'' ಸರ್ಜರಿ

ತುಮಕೂರು: ಶಿರಾ ತಾಲೂಕು ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್​ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ಅವರ ಮನೆ ಸೇರಿದಂತೆ ಆರು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು.

ಡಾ.ಜಗದೀಶ್​ ಅವರ ತುಮಕೂರಿನ ಬಟವಾಡಿ ಮನೆ, ಸಿರಾ ತಾಲೂಕಿನ ಫಾರಂ ಹೌಸ್​, ಬರಗೂರಿನಲ್ಲಿರುವ ವಾಣಿಜ್ಯ ಕಟ್ಟಡ ಸೇರಿದಂತೆ ಆರು ಕಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು.

ಆದಾಯಕ್ಕಿಂತ ಹೆಚ್ಚಿಗೆ ಆಸ್ತಿ ಗಳಿಸಿದ್ದಾರೆ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಬರಗೂರಿನಲ್ಲಿರುವ ವಾಣಿಜ್ಯ ಕಟ್ಟಡ, ತುಮಕೂರಿನ ಬಟವಾಡಿ ಬಳಿ ಇರುವ ಮನೆ, ಮಂಜುನಾಥ್​ ನಗರದಲ್ಲಿರುವ ಕಾಂಪ್ಲೆಕ್ಸ್​ ಮೇಲೆ ದಾಳಿ ನಡೆಸಿದ್ದಾರೆ. ಯಲ್ಪೆನಹಳ್ಳಿ ಗ್ರಾಮದ ವಾಸದ ಮನೆ, ಸಹೋದರ ಕಾಂತರಾಜ್​ ಹಾಗೂ ಡಾ.ಜಗದೀಶ್​ ಪತ್ನಿ ರೂಪ ಹೆಸರಿನಲ್ಲಿರುವ ಮನೆ, ಜಮೀನುಗಳ ಮೇಲೂ ದಾಳಿ ಮಾಡಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಸಂದರ್ಭದಲ್ಲಿ ಶಿರಾ ತಾಲೂಕು ಬರಗೂರಿನಲ್ಲಿಯೂ ಬೇನಾಮಿ ಆಸ್ತಿ ಮಾಡಿರುವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಶಿರಾ ತಾಲೂಕು ಬರಗೂರಿನಲ್ಲಿ ಮೂರು ಕಡೆ, ತುಮಕೂರು ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಮಹತ್ತರವಾದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷಿ$್ಮನಾರಾಯಣ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ಇನ್ಸ್​ಪೆಕ್ಟರ್​ಗಳಾದ ಶಿವರುದ್ರಪ್ಪ ಮೇಟಿ, ಸುರೇಶ್​, ಸಲೀಂ ಅಹಮದ್​ ಮತ್ತಿತರರು ಇದ್ದರು.