ತುಮಕೂರು: ರಾಜ್ಯದಲ್ಲಿರುವ ಭ್ರಷ್ಟಾಚಾರ ಮೂಲೋತ್ಪಾಟನೆ ಮಾಡಲು ಲೋಕಾಯುಕ್ತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ, ವಿದ್ಯಾರ್ಥಿನಿಲಯ, ಗ್ರಾಪಂಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿ, ಸಿಬ್ಬಂದಿ ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿವರ್ಗ, ಸ್ಥಳಿಯ ಸಂಸ್ಥೆಗಳು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆಗಳನ್ನು ಒದಗಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆಯಾಗುವ ಕೋಟ್ಯಾಂತರ ರೂ.ಗಳ ಅನುದಾನವನ್ನು ಉದ್ದೇಶಿತ ಕಾಮಗಾರಿಗಳಿಗೆ ವಿನಿಯೋಗಿಸುವಲ್ಲಿ ರ್ನಿಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತವಾಗಿ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದಲ್ಲಿ ಪೊಲೀಸ್, ಕಾನೂನು, ತಾಂತ್ರಿಕ, ಆಡಳಿತ ಶಾಖೆ ಸೇರಿ ಪ್ರತ್ಯೇಕ ಶಾಖೆಗಳಿದ್ದು, ಸಂಬಂಧಿಸಿದ ಶಾಖೆಗಳ ಅಧಿಕಾರಿಗಳು ಸ್ವೀಕೃತ ದೂರುಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತಕ್ಕೆ ವಿವರಣಾತ್ಮಕ ವರದಿ ನೀಡಲಿದ್ದಾರೆ. ವರದಿಯನ್ನಾಧರಿಸಿ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಲೋಪಗಳನ್ನು ಸರಿಪಡಿಸಲು ಸೂಕ್ತ ನಿರ್ದೇಶನ, ಸಲಹೆಗಳನ್ನು ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಲೋಕಾಯುಕ್ತ ಎಸ್ಪಿ ಎ.ವಿ.ಲಕ್ಷಿ$್ಮನಾರಾಯಣ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಎಸ್ಪಿ ವಿ.ಮರಿಯಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ,ಅಸ್ಗರ್ ಬೇಗ್, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಸೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.
ತ್ಯಾಜ್ಯ ವಿಲೇವಾರಿಗೂ ಲೋಕಾ ಬಿಸಿ ! ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೆಟ್ಟದಂತಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಸ್ಥಳಿಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ತ್ಯಾಜ್ಯ ನಿರ್ವಹಣೆ ಪರಿಶೀಲಿಸಲು ರಾಜ್ಯದಲ್ಲಿ 8 ವಲಯಗಳನ್ನು ಗುರುತಿಸಿ ಜಾಗೃತ ದಳ ಅಧಿಕಾರಿಯನ್ನು ನೇಮಿಸಲಾಗಿದೆ. ದೂರು ಬಂದ ಪ್ರದೇಶಕ್ಕೆ ಜಾಗೃತ ದಳ ಭೇಟಿ ನೀಡಿ ಪರಿಶೀಲಿಸಲಿದೆ. ಈ ಕ್ರಮದಿಂದ ಚಿತ್ರದುರ್ಗ, ವಿಜಯಪುರ, ಶಿವಮೊಗ್ಗ ನಗರಗಳಲ್ಲಿ ಸಂಗ್ರಹವಾಗಿದ್ದ 100 ಟನ್ಗೂ ಹೆಚ್ಚಿನ ತ್ಯಾಜ್ಯ ವಿಲೇವಾರಿಯಾಗಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಎಚ್ಚರಿಸಿದರು. ಕೆರೆ ಒತ್ತುವರಿ ಪ್ರಕರಣ ನಮ್ಮಲ್ಲಿದೆ... ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ತುಮಕೂರಿನ ಎಲ್ಲಾ ಕೆರೆಗಳ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಕೆರೆ-ಕಟ್ಟೆಗಳನ್ನು ಹೊಸದಾಗಿ ನಿಮಾರ್ಣ ಮಾಡಲು ಸಾಧ್ಯವಿಲ್ಲದಿದ್ದರೂ ಇರುವ ಕೆರೆಗಳನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕಿದೆ. ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಪುನ@ಶ್ಚೇತನಗೊಳಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕೆರೆ-ಕುಂಟೆಗಳನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಆಸ್ತಿಯಾದ ಕೆರೆಗಳ ಮೇಲೆ ಮನೆಗಳನ್ನು ನಿಮಾರ್ಣ ಮಾಡಿದರೆ ಕೆರೆಗಳನ್ನು ಉಳಿಸುವುದಾದರೂ ಹೇಗೆ ಸಾಧ್ಯ? ಕಳೆದ 3 ವರ್ಷಗಳಿಂದ ಕೆರೆ ಒತ್ತುವರಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಲು ಹತ್ತಾರುಬಾರಿ ಸ್ಥಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಅಧಿಕಾರಿಗಳು ಸುಧಾರಿಸಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾ.ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದರು.
ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದಲ್ಲಿ ಹುದ್ದೆಯಲ್ಲಿ ಮುಂಬಡ್ತಿ, ವೇತನ ಬಡ್ತಿ, ವಯೋ ನಿವೃತ್ತಿತ್ತಿ ವೇತನದಿಂದ ವಂಚಿತರಾಗಬೇಕಾಗುತ್ತದೆ. ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಜನರ ಶಾಪಕ್ಕೆ ಗುರಿಯಾಗಿ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡದೆ ಜಿಲ್ಲೆಯ ಬೆಳವಣಿಗೆಗೆ ಶ್ರಮಿಸಬೇಕು. ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ನ್ಯಾ.ಬಿ.ಎಸ್.ಪಾಟೀಲ್ ಲೋಕಾಯುಕ್ತ
ಒಂದೇ ಒಂದು ಗ್ರಾಪಂನಲ್ಲು ಸಮರ್ಪಕ ದಾಖಲೆ ಇಲ್ಲ ! ಲೋಕಾಯುಕ್ತದಿಂದ ಇತ್ತೀಚೆಗಷ್ಟೆ ರಾಜ್ಯದ 18 ಗ್ರಾಪಂಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ವೇಳೆ ಒಂದೇ ಒಂದು ಗ್ರಾಪಂನಲ್ಲು ಸಮರ್ಪಕ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲದಿರುವುದು ಬೆಳಕಿಗೆ ಬಂದಿದೆ. ನಗದು ಪುಸ್ತಕದಲ್ಲಿ ಪಂಚಾಯತಿಗೆ ಹಣ ಸಂದಾಯ ಹಾಗೂ ವೆಚ್ಚದ ಮಾಹಿತಿಗಳೇ ಇಲ್ಲ. ಪಂಚಾಯತಿ ಆಸ್ತಿಗಳ ಬಗ್ಗೆಯೂ ಸೂಕ್ತ ದಾಖಲೆಗಳಿಲ್ಲ. ಕಚೇರಿಗಳಲ್ಲಿ ಎಲ್ಲದಕ್ಕೂ ಸೂಕ್ತ ದಾಖಲೆಗಳಿರಬೇಕು. ಪಾರದರ್ಶಕತೆಯಿಂದ ಸೇವೆ ಸಲ್ಲಿಸಬೇಕು ಎಂದು ತಮ್ಮದೇ ಶೈಲಿಯಲ್ಲಿ ನ್ಯಾ.ಬಿ.ಎಸ್.ಪಾಟೀಲ್ ಖಡಕ್ ಸೂಚನೆ ಕೊಟ್ಟರು.