ಜಿಲ್ಲೆ

ಹಕ್ಕು ಪತ್ರ ರೆಡಿ ಇದ್ರೆ ಈಗ್ಲೇ ಕೊಡಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹಕ್ಕುಪತ್ರಗಳು ರೆಡಿ ಇದ್ರೆ ಈಗ್ಲೇ ಕೊಡಿ, ಅವುಗಳಿಗೆ ಮತ್ತಷ್ಟು ಕಾಲಾವಕಾಶ ಏಕೆ ಬೇಕು? ಇಲ್ಲಿಯೇ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಇದ್ದಾರೆ. ನಿಮ್ಮ ಶಾಸಕರನ್ನೂ ಕರೆಯಿರಿ ಅವರೇ ಪೋಟೋ ಹಾಕಿಸಿಕೊಳ್ಳಲಿ ಅಗುವ ಒಳ್ಳೆಯ ಕೆಲಸ ಬೇಗ ಆಗಲಿ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೆಲಮಂಗಲ ತಹಸೀಲ್ದಾರ್ ವಿರುದ್ಧ ಗರಂ ಆದರು.

ನೆಲಮಂಗಲ ತಾಲೂಕಿನ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಹಲವು ದಿನಗಳಿಂದ ಹಕ್ಕುಪತ್ರ ನೀಡುತ್ತಿಲ್ಲ ಎಂಬ ದೂರುದಾರರ ಅರ್ಜಿಗೆ ಪ್ರತಿಕ್ರಿಯಿಸಿದ ನೆಲಮಂಗಲ ತಹಸೀಲ್ದಾರ್ ಹಕ್ಕುಪತ್ರಗಳು ರೆಡಿ ಇವೆ, ಶೀಘ್ರದಲ್ಲೇ ವಿತರಿಸಲಾಗುವುದು ಎಂದ ವೇಳೆ ಸಿಟ್ಟಾದ ವೀರಪ್ಪ ರೆಡಿ ಇದ್ದ ಮೇಲೆ ವಿತರಿಸಲು ಏಕೆ ವಿಳಂಬ ಎಂದು ಕಿಡಿಕಾರಿದರು. ಮಾಜಿ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕಾದ ನಿವೇಶನ, ಪಿಂಚಣಿ ಇತರೆ ಸರ್ಕಾರಿ ಸವಲತ್ತು ನೀಡಲು ವಿಳಂಬ ಧೋರಣೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರಿಗೆ ಅಗೌರವ ತೋರಿಸಿರುವುದು ಸಹಿಸಲು ಸಾಧ್ಯವಿಲ್ಲ. ಹಾಗಾಗಿ 175 ತಾಲೂಕುಗಳ ತಹಸೀಲ್ದಾರ್‌ಗಳ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಶಾಸಕರು ಇದೇ ತಿಂಗಳು 28 ಕ್ಕೆ ಸಮಯ ನೀಡಿದ್ದಾರೆ ಎಂದು ತಹಸೀಲ್ದಾರ್ ಪ್ರತಿಕ್ರಿಯಿಸಿದರು. ತಕ್ಷಣ ವಿತರಿಸಲು ಕ್ರಮ ಕೈಗೊಳ್ಳಿ ತಡಮಾಡಬೇಡಿ ಎಂದು ವೀರಪ್ಪ ಪುನರುಚ್ಚರಿಸಿದರು.

ಸುಳ್ಳು ಪ್ರಕರಣಕ್ಕೆ ಜೈಲು ಶಿಕ್ಷೆ: ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಲೇವಾರಿ ಮಾಡುವ ವೇಳೆ ನೈಜ ಪ್ರಕರಣಗಳು ಹಾಗೂ ಸುಳ್ಳು ಪ್ರಕರಣಗಳು ಎರಡು ಇರುತ್ತವೆ. ಸುಳ್ಳು ಪ್ರಕರಣಗಳಿಂದ ನೈಜ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದ್ದು ಸಾರ್ವಜನಿಕರು ಸುಳ್ಳು ಪ್ರಕರಣ ದಾಖಲಿಸಬೇಡಿ ಎಂದು ಉಪಲೋಕಾಯುಕ್ತ ನ್ಯಾ. ಬಿ ವೀರಪ್ಪ ಹೇಳಿದರು.ರಾಜ್ಯಾದ್ಯಂತ ಲೋಕಾಯುಕ್ತದಲ್ಲಿ 25 ಸಾವಿರ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಸುಮಾರು 10 ಸಾವಿರ ಸುಳ್ಳು ಕೇಸ್‌ಗಳಿವೆ, ಜತೆಗೆ ನಿಷ್ಠಾವಂತ ಅಧಿಕಾರಿಗಳು ಕರ್ತವ್ಯಗಳಿಗೆ ತೊಂದರೆ ಆಗುತ್ತಿವೆ.ಸುಳ್ಳು ಕೇಸ್ ಸಾಬೀತಾದರೆ ಜೈಲು ಶಿಕ್ಷೆ, ಜತೆಗೆೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೋರ್ಟ್ ಕೇಸ್ ಇರುವಾಗ ಲೋಕಾಯುಕ್ತ ಸಂಸ್ಥೆಯಲ್ಲಿ ಕೇಸ್ ವಿಚಾರಣೆ ಮಾಡಲು ಬರುವುದಿಲ್ಲ. ಹಾಗಾಗಿ ಸಾರ್ವಜನಿಕರು ಸುಳ್ಳು ಪ್ರಕರಣಗಳನ್ನ ದಾಖಲಿಸಬೇಡಿ ಎಂದರು.