ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಅಕ್ಷರ ದಾಸೋಹಕ್ಕೆ ಉಡುಪಿ ಜಿಲ್ಲಾ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಶಂಕ್ರಳ್ಳಿ ಬುಧವಾರ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಹಲವು ಸೂಚನೆ ನೀಡಿದರು.
ಬಹುತೇಕ ಕಡೆಯಲ್ಲಿ ಅಕ್ಷರ ದಾಸೋಹದಲ್ಲಿ ಮಕ್ಕಳಿಗೆ ವಿತರಿಸುವ ಆಹಾರ ಪದಾರ್ಥಗಳಲ್ಲಿ ಗುಣಮಟ್ಟದ ಕೊರತೆ ಇದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಬ್ರಿ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಆಹಾರಗಳ ಮೆನು, ಅಕ್ಕಿ, ತರಕಾರಿ, ಮೊಟ್ಟೆ, ಎಣ್ಣೆ ಇವೆಲ್ಲವನ್ನು ಪರಿಶೀಲನೆ ನಡೆಸಿದರು.
ಶಾಲೆಯಲ್ಲಿ ಮೊಟ್ಟೆ ರಿಜಿಸ್ಟ್ರಾರ್ ಬರೆಯದ ಕಾರಣ, ಮುಂದಿನ ದಿನಗಳಲ್ಲಿ ಸೂಕ್ತವಾಗಿ ರಿಜಿಸ್ಟ್ರಾರ್ ನಿರ್ವಹಣೆ ಮಾಡುವಂತೆ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಅವರಿಗೆ ಸೂಚಿಸಿದರು. ಚಿಕ್ಕಿ, ತರಕಾರಿ, ಆಹಾರ ಪದಾರ್ಥಗಳ ಗುಣಮಟ್ಟ, ಎಕ್ಸ್‌ಪರಿ ದಿನಾಂಕದ ಬಗ್ಗೆ ನಿಗಾ ವಹಿಸಲು ಸೂಚಿಸಿದರು.
ಡಿವೈಎಸ್ಪಿ ವಿದ್ಯಾರ್ಥಿಗಳೊಂದಿಗೆ ಅಕ್ಷರ ದಾಸೋಹ ಯೋಜನೆ ಬಗ್ಗೆ ಮಾತನಾಡುವಾಗ ಶಿಕ್ಷಕರನ್ನು ಹೊರಗೆ ಕಳುಹಿಸಿ ಸಮಗ್ರ ಮಾಹಿತಿ ಪಡೆದರು. ಮಕ್ಕಳೇ ಇದು ನಿಮ್ಮ ಹಕ್ಕು ಪೌಷ್ಟಿಕ ಆಹಾರ ಪಡೆದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು. ಇಲ್ಲಿ ಯಾವುದೇ ರೀತಿಯ ನ್ಯೂನತೆ, ಕೊರತೆ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಿ ನಾವು ಸರಿಪಡಿಸಲು ಸಿದ್ಧರಿದ್ದೇವೆ ಎಂದರು.
ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ಹೆಬ್ರಿ ತಾಪಂ ಇಒ ಶಶಿಧರ್ ಕೆ.ಜಿ., ಉಪ ಪ್ರಾಂಶುಪಾಲ ದಿವಾಕರ ಮರಕಾಲ, ಸಿಬ್ಬಂದಿ, ಶಿಕ್ಷಕರು ಇದ್ದರು.
ವಿದ್ಯಾರ್ಥಿಗಳು ಬೇಕಾಬಿಟ್ಟಿಯಾಗಿ ಮೊಬೈಲ್ ಉಪಯೋಗಿಸದೆ, ಸೈಬರ್ ಕ್ರೈಂ ಬಗ್ಗೆ ಜಾಗೂರಕರಾಗಿರಬೇಕು. ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ಯಾವುದೇ ದೂರುಗಳಿದ್ದರೆ ದಾಖಲಿಸಬಹುದು. ಫೇಕ್ ಅಕೌಂಟ್, ಬ್ಲಾಕ್‌ಮೇಲ್, ಲೈಂಗಿಕ ಶೋಷಣೆ, ಹಣದಲ್ಲಿ ಮೋಸ ಈ ರೀತಿಯ ಪ್ರಕರಣ ಕಂಡು ಬಂದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕೆಂದು ಡಿವೈಎಸ್ಪಿ ಮಕ್ಕಳನ್ನು ಎಚ್ಚರಿಸಿದರು.