ಔರಾದ್ ಉಪ ನೋಂದಣಿ ಕಚೇರಿಗೆ ಶನಿವಾರ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಸಿಪಿಐ ರಘುವೀರ ಸಿಂಗ್ ಠಾಕೂರ್, ಪ್ರದೀಪ ಕೊಳ್ಳಾ, ವಾಹೀದ್ ಹುಸೇನ್ ಕೊತವಾಲ್ ಇದ್ದರು. 
ಜಿಲ್ಲೆ

ಉಪ ನೋಂದಣಿ ಕಚೇರಿಗೆ ಲೋಕಾಯುಕ್ತ ಡಿವೈಎಸ್ಪಿ ಭೇಟಿ

ಔರಾದ್: ಬೀದರ್ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ ಶನಿವಾರ ಪಟ್ಟಣದ ಉಪ ನೋಂದಣಿ ಕಚೇರಿಗೆ ಅನಿರೀಕ್ಷತ ಭೇಟಿ ನೀಡಿ ಕಡತ ಪರಿಶೀಲಿಸಿದರು.

ತಮ್ಮ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಕಚೇರಿಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ, ಯಾವುದಕ್ಕೆ ಎಷ್ಟು ಹಣವಿದೆ ಎಂದು ನಿಯಮಾನುಸಾರ ನಾಮಫಲಕ ಹಾಕುವಂತೆ ಅಧಿಕಾರಿ ಪ್ರೇಮಿಬಾಯಿ ಅವರಿಗೆ ಸೂಚಿಸಿದರು.

ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಮಾಹಿತಿ ಪಡೆದರು. ಹೊರಗುತ್ತಿಗೆ ನೌಕರರ ಹಾಜರಾತಿ ನೋಡುವುದು ತಮ್ಮ ಜವಾಬ್ದಾರಿ ಮತ್ತು ಕಚೇರಿಗೆ ಬರುವ ಸಾರ್ವಜನಿಕರಿಗೆ ಅನಗತ್ಯವಾಗಿ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅದಕ್ಕೂ ಮುನ್ನ ಸಂತಪುರ ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಶಾಲೆಯ ಎಲ್ಲ ಸಿಬ್ಬಂದಿ ಒಂದೇ ಕುಟುಂಬದವರಂತೆ ಇರಬೇಕು. ಪ್ರಾಂಶುಪಾಲರು ಎಲ್ಲ ಸಿಬ್ಬಂದಿಗಳ ಜತೆ ಹೊಂದಿಕೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲರೂ ಒಂದು ಮನಸ್ಸಿನಿಂದ ಕೆಲಸ ಮಾಡಿ ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಪಿಎಸ್‌ಗಳಾದ ಪ್ರದೀಪ ಕೊಳ್ಳಾ, ವಾಹೀದ್ ಹುಸೇನ್ ಕೊತವಾಲ್ ಇತರರಿದ್ದರು.