ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ತಾಕೀತು ಕುಂದು ಕೊರತೆ ಅರ್ಜಿ ಸ್ವೀಕಾರ
ಚನ್ನರಾಯಪಟ್ಟಣ : ಸಾರ್ವಜನಿಕರ ಕುಂದು ಕೊರತೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಸಾರ್ವಜನಿಕರು ಲೋಕಾಯುಕ್ತ ಇಲಾಖೆಯನ್ನು ಸದುಪಯೋಗಪಡಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಹಾಸನ ಜಿಲ್ಲಾ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಎಚ್.ಎಸ್.ಸುರೇಶ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಲೋಕಾಯುಕ್ತರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಯಾವುದೇ ಕೆಲಸ, ಕಡತ, ಅರ್ಜಿಯೊಂದಿಗೆ ಬಂದಾಗ ಮೊದಲು ಅವರ ಸಮಸ್ಯೆ ಸಾವಧಾನವಾಗಿ ಆಲಿಸಿದ್ದಲ್ಲಿ ಅರ್ಧ ಸಮಸ್ಯೆ ಬಗೆಹರಿದಂತೆ. ಅಧಿಕಾರಿಗಳು ನಿಮಗೆ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಲು ನಿಮಗೆ ಸರ್ಕಾರಿ ನಿಯಮ ಅಡ್ಡಿ ಇದ್ದರೆ ಅಥವಾ ಅರ್ಜಿದಾರನಿಂದ ಸರಿಯಾದ ಮಾಹಿತಿ ಇಲ್ಲದಿದ್ದರೆ, ಮೇಲಧಿಕಾರಿಗಳ ಗಮನಕ್ಕೆ ತರಬೇಕಾಗಿದ್ದರೆ ನೀವು ಅರ್ಜಿಯ ಹಿಂಬರಹವನ್ನು ಬರದು ಕೊಡಿ ಎಂದರು.
ಅನವಶ್ಯಕವಾಗಿ ಜನರನ್ನು ಕಾರ್ಯಾಲಯಗಳಿಗೆ ಅಲೆಸಬೇಡಿ. ಲೋಕಾಯುಕ್ತ ಮೂರು ನಿಯಮಗಳನುಸಾರ ಕಾರ್ಯನಿರ್ವಹಿಸುತ್ತಿದೆ. ಮುಕ್ತವಾಗಿ ಜನರಿಂದ ಅರ್ಜಿ ಸ್ವೀಕರಿಸುವುದು, ಸರ್ಕಾರಿ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡಲು ನಿಗಾವಹಿಸುವುದು. ಸರ್ಕಾರಿ ಅಧಿಕಾರಿಗಳು ತಮ್ಮ ವೇತನಕ್ಕಿಂತಲೂ ಹೆಚ್ಚು ಚರ, ಸ್ಥಿರಾಸ್ತಿ ಹೊಂದಿದ್ದರೆ ಕಾರ್ಯಾಚರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಈ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ನೀಡಲು ಆಮಿಷಗಳಿಗೆ ಒಳಗಾಗಬೇಡಿ ಎಂದರು.
ಭೂ ದಾಖಲೆಯ ಸಹಾಯಕ ನಿರ್ದೇಶಕ ಲಲ್ಲು ಪ್ರಸಾದ್ ವಿರುದ್ಧ ಹರಿಹಾಯ್ದ ಲೋಕಾಯುಕ್ತರು, ರೈತರಿಗೆ ಸಮರ್ಪಕವಾದ ಸೇವೆ ಒದಗಿಸುತ್ತಿಲ್ಲ ಏಕೆ ಎಂದು ಕಿಡಿಕಾರಿದರು. ಬೆಂಗಳೂರಿನ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ತಿಳಿಸಿ. ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಖಾರವಾಗಿ ನುಡಿದರು. ರೈತರ ಶಾಪ ನಿಮಗೆ ತಟ್ಟುತ್ತದೆ ಎಂದರು.
ಕುಂದುಕೊರತೆ ಸಭೆಯಲ್ಲಿ ತಹಸೀಲ್ದಾರ್ ಕಚೇರಿಯ 5, ಭೂ ದಾಖಲೆಯ ಸಹಾಯಕ ನಿರ್ದೇಶಕರ ಕಚೇರಿಯ 3, ಪುರಸಭೆ 1, ಕೃಷಿ ಇಲಾಖೆ 1, ಪೊಲೀಸ್ ಇಲಾಖೆ 1 ಅರ್ಜಿ ಸೇರಿ ಒಟ್ಟು 11 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಏ.25ರ ಒಳಗೆ ಎಲ್ಲ ಅರ್ಜಿಗಳನ್ನು ಬಗೆಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿ.ಎಸ್.ನವೀನ್ ಕುಮಾರ್, ಲೋಕಾಯುಕ್ತ ನಿರೀಕ್ಷಕಿ ಕೆ. ಶಿಲ್ಪಾ, ಚಂದ್ರಶೇಖರ್, ಲೋಕಾಯುಕ್ತ ಸಿಬ್ಬಂದಿ ರಂಗಸ್ವಾಮಿ, ಸುರೇಶ್, ಪುನೀತ್, ವೀರೇಶ್ ಹಾಗೂ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.