ಶಿವಮೊಗ್ಗ: ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಶಾಲೆ ದುರಸ್ಥಿ ಮತ್ತು ಅಭಿವೃದ್ಧಿ ಕಾಮಗಾರಿಯನ್ನು 77.59 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದ್ದ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರಗೆ ಹಣ ಮಂಜೂರು ಮಾಡಲು ಶೇ.3ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿಯೊಬ್ಬರು ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸೊರಬ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ ಪರುಶುರಾಮ್ ಎಚ್ ನಾಗರಾಳ ಲೋಕಾಯುಕ್ತ ಟ್ರಾೃಪ್‌ಗೆ ಒಳಗಾದವರು. ಸೊರಬ ತಾಲೂಕಿನ ಹಸವಿ ಗ್ರಾಮದ ನಿವಾಸಿ, ಪಿಡಬ್ಲುೃಡಿ ಗುತ್ತಿಗೆದಾರ ಲಿಂಗರಾಜ ಶಿವಪ್ಪ ಉಳ್ಳಾಗಡ್ಡಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಸೊರಬ ತಾಲೂಕಿನ ಚೀಲನೂರು ಹಾಗೂ ಕಣ್ಣೂರು ಗ್ರಾಮಗಳ ರಸ್ತೆ ಡಾಂಬರೀಕರಣ, ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಿಎಂಶ್ರೀ ಯೋಜನೆ ಅಡಿ ಎಣ್ಣೆಕೊಪ್ಪ ಗ್ರಾಮದ ಶಾಲೆ ದುರಸ್ಥಿ ಮತ್ತು ಅಭಿವೃದ್ಧಿಗೆ ಟೆಂಡರ್ ಪಡೆದಿದ್ದ ಲಿಂಗರಾಜ ಅವರು 77,59,437 ರೂ. ಕಾಮಗಾರಿ ಮುಗಿಸಿದ್ದರು. ಆ ಕಾಮಗಾರಿಗಳ ಹಣ ಮಂಜೂರು ಮಾಡಲು ಪರುಶುರಾಮ್ ಎಚ್ ನಾಗರಾಳ ಅವರು ಶೇ.3ರಂತೆ ಲಂಚಕ್ಕೆ ಬೇಡಿಕೆ ಇಟ್ಟು ಅದರಲ್ಲಿ ಈಗಾಗಲೇ 1.63 ಲಕ್ಷ ರೂ. ಪಡೆದಿದ್ದರು.
ಬಾಕಿ 70 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಸೋಮವಾರ ಸಂಜೆ ಪರುಶುರಾಮ ಎಚ್ ನಾಗರಾಳ ಅವರು ಶಿರಾಳಕೊಪ್ಪದ ಶಿಕಾರಿಪುರ ರಸ್ತೆಯ ಲಕ್ಷ್ಮೀ ಮೆಡಿಕಲ್ ಸ್ಟೋರ್ ಎದುರು ಲಿಂಗರಾಜ ಅವರಿಂದ 30 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ. ಪರಶುರಾಮ ನಾಗರಾಳ ಅವರನ್ನು ವಶಕ್ಕೆ ಪಡೆದಿದ್ದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್ ಅವರು ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ.ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಕೆ.ಪಿ.ರುದ್ರೇಶ್ ಟ್ರಾೃಪ್ ಮಾಡಿದ್ದು, ಇನ್‌ಸ್ಪೆಕ್ಟರ್ ಗುರುರಾಜ ಎನ್ ಮೈಲಾರ್, ವೀರಬಸಪ್ಪ ಕುಸಲಾಪುರ, ಸಿಬ್ಬಂದಿಗಳಾದ ಜಿ.ಸಿ.ಯೋಗೇಶ್, ಎಂ.ಮಂಜುನಾಥ, ಟೀಕಪ್ಪ, ಎಚ್.ಜಿ.ಸುರೇಂದ್ರ, ಬಿ.ಟಿ.ಚನ್ನೇಶ್, ವಿ.ದೇವರಾಜ್, ಪ್ರಕಾಶ್ ಬಾರಿಮರದ, ಚಂದ್ರಿಬಾಯಿ, ಪ್ರದೀಪ, ಜಯಂತ, ಗಂಗಾಧರ, ಆನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.