ಜಿಲ್ಲೆ

ಲೋಕಸಭಾ ಚುನಾವಣೆ: ಮೈಸೂರಿನಲ್ಲಿ ಮದ್ಯ ಮಾರಾಟ ನಿಷೇಧ

ಮೈಸೂರು: ಲೋಕಸಭಾ ಚುನಾವಣೆಯು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮತದಾನದ ಅಂಗವಾಗಿ ಏ.24ರಂದು ಸಂಜೆ 5 ರಿಂದ ಏ.26ರಂದು ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ಅಂಗವಾಗಿ ಜೂ.3ರಂದು ಮಧ್ಯರಾತ್ರಿ 12ರಿಂದ ಜೂ. 4ರ ಮಧ್ಯರಾತ್ರಿ 12ರವರೆಗೆ ಮೈಸೂರು ನಗರ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿನ ಎಲ್ಲ್ಲ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಣೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸ(ಡ್ರೈ ಡೇಸ್)ಗಳೆಂದು ಘೋಷಿಸಲಾಗಿದೆ.


ಎಲ್ಲ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿಸಿ ಮೊಹರು ಮಾಡಿ ಅದರ ಕೀಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಬೇಕಾಗಿ ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿರಾಜೇಂದ್ರ ಸೂಚಿಸಿದ್ದಾರೆ

ಶಸ್ತ್ರಾಸ್ತ್ರ ಹಿಡಿದು ಓಡಾಡುವುದಕ್ಕೆ ನಿಷೇಧ


ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಜೂ.6 ರವರೆಗೆ ಯಾವುದೇ ವ್ಯಕ್ತಿಗಳು ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಒಯ್ಯುವ ಅಥವಾ ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಸ್ವರೂಪದ ಆಯುಧ ರಹದಾರಿ ಹೊಂದಿರುವವರು ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ಸವಗಳ ಮುಂದೂಡಿಕೆ

ಲೋಕಸಭಾ ಚುನಾವಣೆ ಏ.26ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ರೀತಿಯ ಜಾತ್ರೆ, ಸಂತೆ, ಉತ್ಸವಗಳನ್ನು ಮುಂದೂಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.