ಜಿಲ್ಲೆ

ಬೆಳಗ್ಗೆ ಕಾಂಗ್ರೆಸ್ ಸೇರ್ಪಡೆ, ಮರುದಿನ ಬಿಜೆಪಿಗೆ ವಾಪಸ್: ಪಕ್ಷಾಂತರ ಪರ್ವದ ಹೈಡ್ರಾಮಾದಿಂದ 'ಕೈ'ಗೆ ಇರಿಸು ಮುರಿಸು

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲಿಯೂ ಸಣ್ಣಪುಟ್ಟ ಮುಖಂಡರಿಗೂ ಭಾರೀ ಡಿಮಾಂಡ್ ನಡೆಯುತ್ತಿದೆ. ಈ ಕಾರಣಕ್ಕೆ ಪ್ರತಿಷ್ಠೆಯನ್ನು ಪಣವಾಗಿಟ್ಟು ಅವರನ್ನು ಸೆಳೆಯುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ. ಇಂತಹುದೇ ಪಕ್ಷಾಂತರ ಪ್ರಕರಣವೊಂದು ಕಾಂಗ್ರೆಸ್‌ಗೆ ಇರಿಸು ಮುರಿಸು ತರಿಸಿದೆ.
ಮಂಡ್ಯ ನಗರದ ಶಂಕರಮಠದ ಬಿಜೆಪಿ ಮುಖಂಡರಾದ ವಿನೋದ್, ಅಕ್ಕಿ ಅಂಗಡಿ ರಾಮಕೃಷ್ಣ, ರವಿ, ರಘು, ಮಧು, ಮಂದೀಪ್, ಮನೀಶ್, ದಿಲೀಪ್, ಪ್ರದೀಪ್ ಎಂಬುವರನ್ನು ಶುಕ್ರವಾರ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡಿದವು. ಆದರೆ ಆನಂತರ ನಡೆದಿದ್ದು ರಾಜಕೀಯದ ತಂತ್ರಗಾರಿಕೆ. ಅದೆಂದರೆ ಕಾಂಗ್ರೆಸ್ ಸೇರ್ಪಡೆಯಾದವರೆಲ್ಲರೂ ಶನಿವಾರ ಮತ್ತೆ ಬಿಜೆಪಿಗೆ ಕರೆತರುವಲ್ಲಿ ಕಮಲ ಪಾಳೆಯ ಯಶಸ್ವಿಯಾಗಿದೆ.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಖಂಡರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ನೇತೃತ್ವದಲ್ಲಿ ಭೇಟಿ ಮಾಡಿ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಎಲ್ಲರಿಗೂ ಪಕ್ಷದ ಬಾವುಟ ಕೊಟ್ಟ ಹಾಗೂ ಹೂವಿನ ಹಾರ ಹಾಕಿ ಬಿಜೆಪಿಗೆ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಇಂದ್ರೇಶ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಿಂದುತ್ವಕ್ಕಾಗಿ ಪಕ್ಷದಲ್ಲಿ ಮುಖಂಡರು ಸಕ್ರಿಯವಾಗಿದ್ದರು. ಆದರೆ ಶಾಸಕ ರವಿಕುಮಾರ್ ಗಣಿಗ ಅವರು ಒತ್ತಡ ಹಾಕಿ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದರು. ಅದಕ್ಕೆ ಅವಕಾಶ ಸಿಕ್ಕಿಲ್ಲ. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಜ್ಜಾಗಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.