ಜಿಲ್ಲೆ

ಮಾಜಿ ಸಿಎಂ ಕುಮಾರಸ್ವಾಮಿಗೆ ಗೃಹಲಕ್ಷ್ಮೀಯರ ಆರ್ಶೀವಾದ: ಹುಸಿಯಾದ ಕಾಂಗ್ರೆಸ್ ಪಕ್ಷದ ನಿರೀಕ್ಷೆ

ಮಂಡ್ಯ: ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ. ಈ ನಡುವೆ ಕ್ಷೇತ್ರದ ಗೃಹಲಕ್ಷ್ಮೀಯರ ಆರ್ಶೀವಾದ ಎಚ್‌ಡಿಕೆ ಅವರಿಗೆ ಸಿಕ್ಕಿದೆ.

ಈ ಚುನಾವಣೆಯಲ್ಲಿ ಕ್ಷೇತ್ರದ ಗೃಹಲಕ್ಷ್ಮೀಯರ ಆರ್ಶೀವಾದ ಯಾರಿಗೆ ಸಿಕ್ಕಿದೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇತ್ತು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಅಂತೆಯೇ ಮತದಾನ ಪ್ರಮಾಣದಲ್ಲಿಯೂ ಗೃಹಲಕ್ಷ್ಮೀಯರೇ ಮುಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸಾಂಪ್ರದಾಯಕ ಮತ ಬಂದಿವೆಯಾದರೂ ಮಹಿಳೆಯರು ಯಾರನ್ನು ಬೆಂಬಲಿಸಿದ್ದಾರೆನ್ನುವ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮಾತ್ರವಲ್ಲದೆ ಮಂಡ್ಯ ಫಲಿತಾಂಶದ ಬಗ್ಗೆ ಯಾರನ್ನೇ ಕೇಳಿದರೂ ಮಹಿಳಾ ುತದಾರರು ಬೆಂಬಲಿಸಿದವರೇ ಗೆಲ್ಲುತ್ತಾರೆಂದು ಹೇಳುತ್ತಿದ್ದರು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ.

ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ ಯೋಜನೆಯಡಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಇದಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಂದು ಲಕ್ಷ ರೂ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲಾಗಿತ್ತು. ಈ ಕಾರಣಕ್ಕೆ ಮಹಿಳೆಯರ ಬಲ ನಮಗೆ ಸಿಕ್ಕಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಆದರೆ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗೆ ಮಹಿಳೆಯರ ಬೆಂಬಲ ಸಿಕ್ಕಿಲ್ಲ. ಕಾರಣ ಗ್ಯಾರಂಟಿ ಯೋಜನೆ ಎಲ್ಲರನ್ನೂ ತಲುಪುವಲ್ಲಿ ವಿಫಲವಾಗಿದೆ. ಮಾತ್ರವಲ್ಲದೆ ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಮಹತ್ವದ ಯೋಜನೆಯನ್ನು ಎಚ್‌ಡಿಕೆ ಜಾರಿಗೊಳಿಸಿದ್ದರು. ಇದರಿಂದ ಎಷ್ಟೋ ಕುಟುಂಬ ಬೀದಿ ಪಾಲಾಗುವುದು ತಪ್ಪಿದೆ. ಇದರಿಂದಾಗಿ ಮಹಿಳೆಯರ ಬೆಂಬಲ ಮೈತ್ರಿ ಸಿಕ್ಕಿದೆ.