ಮಂಡ್ಯ: ಹೈವೋಲ್ಟೇಜ್ ಕಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬರೋಬರಿ 2,84,620 ಮತಗಳ ಅಂತರದ ಭರ್ಜರಿ ಜಯದೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದ 13ನೇ ಲೋಕಸಭಾ ಸದಸ್ಯರಾಗಿ ಸಂಸತ್ ಪ್ರವೇಶಿಸಿದ್ದಾರೆ. ಮಾತ್ರವಲ್ಲದೆ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್‌ನ ಜಂಘಾಬಲಕ್ಕೆ ದೊಡ್ಡ ಪೆಟ್ಟು ನೀಡುವುದರ ಜತೆಗೆ ಜೆಡಿಎಸ್‌ನ ಹೊಸ ಶಕೆ ಪ್ರಾರಂಭಕ್ಕೆ ನಾಂದಿಯಾಡಿದ್ದಾರೆ.
ಈ ಲೋಕಸಭಾ ಚುನಾವಣೆ ಜೆಡಿಎಸ್ ಪಾಲಿಗೆ ಜಿಲ್ಲೆಯಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಅದಾಗಲೇ ಸರಣಿಯಾಗಿ ಚುನಾವಣೆಗಳನ್ನು ಸೋತು ಸೊರಗಿದ್ದ ಪಕ್ಷವನ್ನು ಮತ್ತೆ ಪುಟಿದೇಳುವಂತೆ ಮಾಡಲು ಖುದ್ದು ದಳಪತಿಯೇ ಬರಬೇಕಾಯಿತು. ಕ್ಷೇತ್ರದ ಮಾಜಿ ಶಾಸಕರ ಒತ್ತಾಯ ಹಾಗೂ ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಚುನಾವಣಾ ಕಣಕ್ಕಿಳಿದ ಕುಮಾರಸ್ವಾಮಿಗೆ ಅಭೂತಪೂರ್ವ ಗೆಲುವನ್ನು ಜನರು ನೀಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ.
ಮತಗಳಿಕೆಯಲ್ಲಿ ದಾಖಲೆ ಬರೆದ ಎಚ್‌ಡಿಕೆ: ಮಂಡ್ಯ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಎಚ್‌ಡಿಕೆ ಎರಡನೇ ಅತಿದೊಡ್ಡ ಗೆಲುವನ್ನು ಪಡೆದಿದ್ದಾರೆ. 2019 ಉಪಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡ 3,24,943 ಮತಗಳಿಂದ ಗೆಲುವು ಸಾಧಿಸಿರುವುದು ದಾಖಲೆಯಾಗಿ ಉಳಿದಿದೆ.
ಇನ್ನು ಈ ಬಾರಿಯ ಚುನಾವಣೆಯನ್ನು ಗಮನಿಸಿದರೆ ಎರಡು ಬಾರಿ ಸಿಎಂ ಆಗಿದ್ದ ಎಚ್‌ಡಿಕೆಗೆ ಸ್ಪರ್ಧಾತ್ಮಕ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸವಾಲೆಸೆದಿದ್ದರು. ಇದರಿಂದಾಗಿ ಕ್ಷೇತ್ರ ಹೈವೋಲ್ಟೇಜ್ ಆಗಿತ್ತು. ಆದಾಗ್ಯೂ ಕ್ಷೇತ್ರದ ಜನರು ಎಚ್‌ಡಿಕೆಗೆ ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಕ್ಷೇತ್ರದ 13ನೇ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಈವರೆಗಿನ ಮಂಡ್ಯ ಲೋಕಸಭಾ ಸದಸ್ಯರಿವರು