ಮಂಡ್ಯ: ರೈತ ವಿರೋಧಿ ಎನ್‌ಡಿಐ ಒಕ್ಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಬಿಜೆಪಿ ಮತ್ತದರ ಮಿತ್ರಪಕ್ಷಗಳನ್ನು ಸೋಲಿಸಿ, ರೈತ ಸಮುದಾಯವನ್ನು ಉಳಿಸಿ ಘೋಷಣೆಯೊಂದಿಗೆ ಈ ಬಾರಿಯ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಚಳವಳಿ ರೀತಿ ಮಾಡಲಾಗುವುದು. ದೆಹಲಿಯಲ್ಲಿ ನಡೆದ 22 ರಾಜ್ಯಗಳ ರೈತ ಸಂಘಟನೆಗಳ ಸಭೆಯಲ್ಲಿ ಎನ್‌ಡಿಎ ಸರ್ಕಾರಕ್ಕೆ ಸಜೆ ವಿಧಿಸೋಣ ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ. ಸಜೆ ಅಂದರೆ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ರೈತರ ಆರೋಪಗಳ ಪಟ್ಟಿಗಳಿರುವ 50 ಲಕ್ಷ ಕರಪತ್ರಗಳನ್ನು ಮುದ್ರಿಸಿ ರಾಜ್ಯಾದ್ಯಂತ ಹಂಚಿಕೆ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ರೈತ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿೃಸಿ ದೇಶದಲ್ಲಿ ಅಧಿಕಾರ ನಡೆಸುತ್ತಿದೆ. ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದಕ್ಕೆ ಧಕ್ಕೆ ತರುವ ಜತೆಗೆ ದೇಶದ ಏಕತೆಗೆ ಭಂಗ ತರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ನಾಶ ಖಂಡಿತ ಎಂದು ಆತಂಕ ವ್ಯಕ್ತಪಡಿಸಿದ ಅವರು, ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ. ಸ್ವಾಮಿನಾಥನ್ ವರದಿಯನ್ವಯ ಕೃಷಿ ವೆಚ್ಚದೊಂದಿಗೆ 50 ರೂ ಹೆಚ್ಚುವರಿ ಸೇರಿಸಿ ಬೆಂಬಲ ಬೆಲೆ ನೀಡುತ್ತೇವೆ. ಉದ್ಯೋಗ ಸೃಷ್ಟಿಸುತ್ತೇವೆಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಬೆಂಬಲ ಬೆಲೆ ಕೊಡಲಾಗದು ಎಂದು ಕೇಂದ್ರ ಸರ್ಕಾರವು 2016ರ ಫೆ.26ರಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಇದರ ಪರಿಣಾಮ ಕೃಷಿ ವೆಚ್ಚ ಡಬಲ್ ಆಗಿದೆ ಎಂದು ವಿವರಿಸಿದರು.
ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ 1.74 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ರೈತರ ಸಾವು ಕೇಂದ್ರ ಸರ್ಕಾರಕ್ಕೆ ಲೆಕ್ಕಕ್ಕೆ ಇಲ್ಲವಾಗಿದೆ. ರೈತರ ಆತ್ಮಹತ್ಯೆಗಳಿಗೆ ಕಾರಣಗಳನ್ನು ಹುಡುಕುವ, ತಜ್ಞರ ಸಮಿತಿ ರಚಿಸುವ ಪ್ರಯತ್ನವನ್ನೂ ಮಾಡಿಲ್ಲ. ಇನ್ನು ಜೆಡಿಎಸ್ ರೈತರ ಪರವಾಗಿಲ್ಲ. ಹೆಸರಿಗಷ್ಟೇ ಜಾತ್ಯಾತೀತ ಜನತಾದಳ. ಆದರೆ, ಆ ಮನೋಭಾವವೂ ಇಲ್ಲ ಎಂದ ಅವರು, ಮೇಕೆದಾಟು ಯೋಜನೆ ಅನುಷ್ಠಾನವಾಗಲೇಬೇಕು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ರೈತಸಂಘದಿಂದ ಪತ್ರ ಬರೆಯಲಾಗಿದೆ. ನೆರೆ ರಾಜ್ಯದ ರಾಜಕೀಯ ಪಕ್ಷವೊಂದು ಮೇಕೆದಾಟು ಯೋಜನೆಗೆ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲವೆಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದು ಖಂಡನೀಯ ಎಂದು ಟೀಕಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಖಜಾಂಚಿ ತಗ್ಗಹಳ್ಳಿ ಪ್ರಸನ್ನ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮುಖಂಡರಾದ ಕೆನ್ನಾಳು ನಾಗರಾಜು, ಚಂದ್ರಶೇಖರ್, ಶಿವಳ್ಳಿ ಚಂದ್ರು, ಮಲ್ಲೇಶ್, ಸಾಲಿಗ್ರಾಮ ಎಸ್.ಪಿ.ಶೇಖರ್, ರಂಗೇಗೌಡ ಹಾಜರಿದ್ದರು.