ಜಿಲ್ಲೆ

ಎಚ್.ಡಿ.ಕುಮಾರಸ್ವಾಮಿ ಆಸ್ತಿ ಮೌಲ್ಯ 54.65 ಕೋಟಿ ರೂ: ಮಾಜಿ ಸಿಎಂ ಮನೆಯಲ್ಲಿವೆ 52 ಬಂಡೂರು ಕುರಿ, 20 ಹಸು...!!!!

ಮಂಡ್ಯ: ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಎಚ್.ಡಿ.ಕುಮಾರಸ್ವಾಮಿ 54.65 ಕೋಟಿ. ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಶೇಷವೆಂದರೆ ಇವರ ಮನೆಯಲ್ಲಿ 20 ಹಸುಗಳು, 52 ಬಂಡೂರು ಕುರಿಗಳಿವೆ. ಆದರೆ ಒಂದು ಸ್ವಂತ ಕಾರಿಲ್ಲ. ಇನ್ನು 100ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಹೊಂದಿರುವ ಇವರ ಬಳಿ ಉಳುಮೆ ಮಾಡಲು ಒಂದು ಟ್ರ್ಯಾಕ್ಟರ್ ಇದೆ.
65 ವರ್ಷ ವಯಸ್ಸಿನ ಎಚ್‌ಡಿಕೆ ಬಿಎಸ್ಸಿ ಪದವೀಧರರಾಗಿದ್ದು, ಅವರ ಬಳಿ ಪ್ರಸ್ತುತ 10.38 ಲಕ್ಷ ರೂ ನಗದು ಇದೆ. ಇವರು 7 ಬ್ಯಾಂಕ್ ಖಾತೆಗಳಲ್ಲಿ 32.79 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. 750 ಗ್ರಾಂ ಚಿನ್ನಾಭರಣ, 12.5ಕಿಲೋ ಬೆಳ್ಳಿ ವಸ್ತುಗಳು ಸೇರಿದಂತೆ 10.71 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 43.94 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯ ಮಾಲೀಕರಿದ್ದಾರೆ. ಅಂತೆಯೇ 19.12 ಕೋಟಿ ರೂ. ಸಾಲ ಮಾಡಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಎರಡು ಕ್ರಿಮಿನಲ್ ಹಾಗೂ ಒಂದು ಪಿಸಿಆರ್ ಪ್ರಕರಣ ದಾಖಲಾಗಿದೆ.
ಇನ್ನು ಎಚ್ಡಿಕೆ ಅವರಿಗಿಂತ ಪತ್ನಿ ಅನಿತಾ ಶ್ರೀಮಂತೆ. 90.32 ಕೋಟಿ ರೂ ಮೌಲ್ಯದ ಚರಾಸ್ತಿ, 64.07 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 154.39 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೈಯಲ್ಲಿ 10.77 ಲಕ್ಷ ರೂ. ನಗದು ಹೊಂದಿರುವ ಇವರು, 10 ಬ್ಯಾಂಕ್ ಖಾತೆಗಳಲ್ಲಿ 1.38 ಕೋಟಿ ರೂ. ಠೇವಣಿ ಇಟ್ಟಿದ್ದಾರೆ.
ಇವರ ಬಳಿ ಒಂದು ಇನ್ನೋವಾ ಕಾರು, 2.41 ಕೋಟಿ ರೂ. ಮೌಲ್ಯದ 3.852 ಕಿಲೋ ಚಿನ್ನಾಭರಣ, 13.09 ಲಕ್ಷ ರೂ. ಮೌಲ್ಯದ 17 ಕಿಲೋ ಬೆಳ್ಳಿ ವಸ್ತುಗಳಿವೆ. 28.38 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, 35.69 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳು ಸೇರಿದಂತೆ 64.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.