module: a; hw-remosaic: 0; touch: (0.28020835, 0.28020835); modeInfo: ; sceneMode: Auto; cct_value: 0; AI_Scene: (-1, -1); aec_lux: 113.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಕಾಂಗ್ರೆಸ್‌ನಲ್ಲಿಗ ತಪ್ಪಿನ ಲೆಕ್ಕಾಚಾರ: ಗ್ಯಾರಂಟಿ ಯೋಜನೆ ನಂಬಿ ಕೆಟ್ಟ ‘ಕೈ’ ಪಾಳಯ

ಮಂಡ್ಯ: ಕೇವಲ ಒಂದು ವರ್ಷದ ಅವಧಿಯೊಳಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ವರ್ಚಸ್ಸು ಬದಲಾಗಿದೆ. ಅತೀವ ವಿಶ್ವಾಸ, ಗ್ಯಾರಂಟಿ ಯೋಜನೆಗಳ ಮೇಲಿದ್ದ ಅಪಾರ ನಂಬಿಕೆ ಎನ್ನುವ ನಾಯಕರ ಲೆಕ್ಕಾಚಾರ ತಪ್ಪೆಂದು ಮನವರಿಕೆಯಾಗಿದೆ. ಮೂರೇ ದಿನದ ಅವಧಿಯಲ್ಲಿ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದರ ಬೆನ್ನಲ್ಲೇ ತಮ್ಮ ‘ತಪ್ಪಿನ’ ಪರಾಮರ್ಶೆ ನಡೆಯುತ್ತಿದೆ. ಅದರಂತೆ ಶೀಘ್ರದಲ್ಲಿಯೇ ಪ್ರತಿ ಕ್ಷೇತ್ರವಾರು ಆತ್ಮಾವಲೋಕನ ಸಭೆ ಆಯೋಜಿಸಲಾಗುತ್ತಿದೆ.
ಲೋಕಸಭೆ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿನ ನಿರೀಕ್ಷೆಗೂ ಮೀರಿದ ಸೋಲು ಕಾಂಗ್ರೆಸ್‌ನೊಳಗೆ ತಳಮಳ ಸೃಷ್ಟಿಸುವಂತೆ ಮಾಡಿದೆ. ಇನ್ನು ಚುನಾವಣೆ ಲೆಕ್ಕಾಚಾರಕ್ಕೆ ಬರುವುದಾದರೆ ಗೆಲುವಿರಲಿ, ಅದರ ಸಮೀಪಕ್ಕೂ ಅಥವಾ ಸವಾಲೊಡ್ಡದೇ ಜೆಡಿಎಸ್‌ಗೆ ಶರಣಾಗಿರುವುದು ಇರಿಸು ಮುರಿಸು ತರಿಸಿದೆ. ಸತತವಾಗಿ ಚುನಾವಣೆಗಳನ್ನು ಗೆದ್ದುಕೊಂಡು ಬರುತ್ತಿದ್ದ ಕಾಂಗ್ರೆಸ್‌ನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸೋಲಿಗೆ ಎಲ್ಲಿ ತಪ್ಪಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ.
ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಲೋಕಸಭಾ ಚುನಾವಣೆ ಹಾಗೂ ಮುಗಿದ ನಂತರವೂ ಕಾಂಗ್ರೆಸ್‌ನ ಆತ್ಮವಿಶ್ವಾಸ ಕುಗ್ಗಿರಲಿಲ್ಲ. ಎರಡು ಚುನಾವಣೆಯಲ್ಲಿಯೂ ತಮ್ಮದೇ ಗೆಲುವು ಎನ್ನುವುದನ್ನು ನಾಯಕರು ಹೇಳುತ್ತಿದ್ದರು. ಆದರೆ ಈ ಲೆಕ್ಕಾಚಾರದ ನಡುವೆಯೂ ಕ್ಷೇತ್ರದ ಮತದಾರರ ತಮ್ಮೊಳಗೆ ಇನ್ನೊಂದು ಲೆಕ್ಕಾಚಾರವನ್ನು ಹಾಕಿಕೊಂಡಿರುವುದು ಫಲಿತಾಂಶ ಮೂಲಕ ಸ್ಪಷ್ಟವಾಗಿದೆ. ಗ್ಯಾರಂಟಿ ಯೋಜನೆಗಳು ಅದರಲ್ಲಿಯೂ ಮಹಿಳಾ ಮತದಾರರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆನ್ನುವ ಅಚಲ ವಿಶ್ವಾಸ ಕಾಂಗ್ರೆಸ್‌ಗೆ ಇತ್ತು. ಈ ಕಾರಣಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿಯ ಒಳತಂತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇದಲ್ಲದೆ ಅಹಿಂದ ಮತಗಳನ್ನು ಟಾರ್ಗೆಟ್ ಮಾಡಿ ಸಮುದಾಯಗಳ ಓಲೈಕೆ ಮಾಡಿದ ಕಾಂಗ್ರೆಸ್, ಜಿಲ್ಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಒಕ್ಕಲಿಗ ಹಾಗೂ ಲಿಂಗಾಯತ, ಬ್ರಾಹ್ಮಣ ಸಮುದಾಯಗಳನ್ನು ನಿರ್ಲಕ್ಷೃ ಮಾಡಿತ್ತು.
ಇದಲ್ಲದೆ ಅನಗತ್ಯ ವಿವಾದಗಳು ಕಾಂಗ್ರೆಸ್‌ಗೆ ಪೆಟ್ಟು ಬಿದ್ದವು. ಕೆರಗೋಡು ಹನುಮ ಧ್ವಜ ವಿವಾದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ‘ಕೈ’ಗೆ ದೊಡ್ಡಮಟ್ಟದ ಹಿನ್ನಡೆಯುಂಟು ಮಾಡಿತು. ಪರಿಣಾಮ ಕೆರಗೋಡು ಹೋಬಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಮತಗಳು ಜೆಡಿಎಸ್ ತೆಕ್ಕೆ ಬಿದ್ದವು. ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಮದ್ದೂರು ಶಾಸಕ ಕೆ.ಎಂ.ಉದಯ್ ಅವರು ಕುಮಾರಸ್ವಾಮಿ ಆರೋಗ್ಯ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಲಘುವಾಗಿ ಮಾತನಾಡಿದ್ದು ಒಕ್ಕಲಿಗ ಸಮುದಾಯದ ಮತಗಳು ಕಾಂಗ್ರೆಸ್ ವಿರುದ್ಧ ಗಟ್ಟಿಗೊಳಿಸಿದವು. ಅಂತೆಯೇ ಕಾವೇರಿ ನೀರಿನ ವಿವಾದ, ನಾಲೆಗೆ ನೀರು ಹರಿಸದ ಪರಿಣಾಮ ಬೆಳೆ ಹಾಳಾಗಿದ್ದು ರೈತ ಸಮುದಾಯ ಆಕ್ರೋಶಗೊಳ್ಳುವಂತೆ ಮಾಡಿದವು. ಅಂತೆಯೇ ಎರಡು ಹಾಗೂ ಮೂರನೇ ಹಂತದ ಪಕ್ಷದ ಮುಖಂಡರನ್ನು ಕಾಂಗ್ರೆಸ್ ಸರಿಯಾಗಿ ಬಳಕೆ ಮಾಡಿಕೊಂಡು ಮತ ಸೆಳೆಯುವಲ್ಲಿ ವಿಫಲವಾಯಿತು.
ಎರಡು ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಚ್ಚರಿಕೆ ವಹಿಸುತ್ತಿದೆ. ಅದರಂತೆ ಶೀಘ್ರದಲ್ಲಿಯೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆಯಾಗಲಿದ್ದು, ಅದಕ್ಕೆ ಸಿದ್ಧವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಆತ್ಮಾವಲೋಕನ ಹಾಗೂ ಮತದಾರರಿಗೆ ಕೃತಜ್ಞತಾ ಸಭೆ ಆಯೋಜಿಸಲಾಗುತ್ತಿದೆ.

ಎರಡು ಚುನಾವಣೆಯ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿವೆ. ಸೋಲಿನ ಬಗ್ಗೆ ಪರಾಮರ್ಶೆ ಮಾಡಬೇಕಿದೆ. ನಮ್ಮಲ್ಲಿನ ಕೆಲ ತಪ್ಪುಗಳಿಂದ ಸೋಲು ಎದುರಾಗಿದೆ. ಇನ್ನು ಪ್ರತಿ ವಿಧಾನಸಭಾ ಕ್ಷೇತ್ರವಾರು ಮತದಾರರಿಗೆ ಕೃತಜ್ಞತಾ ಸಭೆ ಆಯೋಜಿಸಲಾಗುವುದು.ಸಿ.ಡಿ.ಗಂಗಾಧರಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ