ಮಂಡ್ಯ: ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೊದಲ ಬಾರಿಗೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿರುವ ಸ್ಟಾರ್ ಚಂದ್ರು ನಡುವಿನ ಸ್ಪರ್ಧೆಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರವಾಗಿ ಹೈವೋಲ್ಟೇಜ್ ಆಗಿ ಬದಲಾಗಿದೆ. ಇದನ್ನು ಇನ್ನಷ್ಟು ಕಾವೇರಿಸಲು ಏ.17ರಂದು ಸಕ್ಕರೆನಾಡಿಗೆ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಆಗಮಿಸಲಿದ್ದಾರೆ.
ಚುನಾವಣೆ ಪೂರ್ವದಲ್ಲಿದ್ದ ಲೆಕ್ಕಾಚಾರದಂತೆ ಪ್ರಸ್ತುತ ಕ್ಷೇತ್ರವಿಲ್ಲ. ಮೈತ್ರಿ ಅಭ್ಯರ್ಥಿ ಎಚ್‌ಡಿಕೆಗೆ ಕಾಂಗ್ರೆಸ್ ಹುರಿಯಾಳು ಚಂದ್ರು ನಿರೀಕ್ಷೆಗೂ ಮೀರಿ ಪೈಪೋಟಿ ನೀಡುತ್ತಿದ್ದಾರೆ. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಹಿರಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಪ್ರಬಲ ನಾಯಕತ್ವ ಚಂದ್ರು ಬೆನ್ನಿಗಿದೆ. ಅಲ್ಲದೆ ಎಂಟರ ಪೈಕಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಹಜವಾಗಿಯೇ ಅಭ್ಯರ್ಥಿ ಜತೆಗೆ ಮುಖಂಡರು, ಕಾರ್ಯಕರ್ತರ ಹುಮ್ಮಸ್ಸನ್ನು ವೃದ್ಧಿಸಿದೆ.
ಇನ್ನು ಚುನಾವಣೆ ವಿಚಾರಕ್ಕೆ ಬರುವುದಾದರೆ ಕಳೆದ ವಿಧಾನಸಭೆಯಲ್ಲಿ ಮಾಡಿದಂತಹ ಪ್ಲಾೃನ್‌ಗಳನ್ನೇ ಯಥಾವತ್ತಾಗಿ ಕಾಂಗ್ರೆಸ್ ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಈ ಪೈಕಿ ಪ್ರಮುಖವಾಗಿ ಭಾರತ್ ಜೋಡೋ ಯಶಸ್ಸು ಕಾಂಗ್ರೆಸ್‌ನ ವರ್ಚಸ್ಸನ್ನು ಹೆಚ್ಚಿಸುವುದರ ಜತೆಗೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬೆಂಬಲಿತ ಸೇರಿ ಆರನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಭಾರತ್ ಜೋಡೋ ಸಮಯದಲ್ಲಿ ರಾಹುಲ್‌ಗಾಂಧಿ ಹಾಗೂ ಸೋನಿಯಾಗಾಂಧಿ ಅವರಿಗೆ ಜಿಲ್ಲೆಯ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದರು. ಇದು ಕಾಂಗ್ರೆಸ್‌ಗೆ ಅದೃಷ್ಟ ತಂದುಕೊಟ್ಟಿತ್ತು. ಈ ನಿಟ್ಟಿನಲ್ಲಿ ಸಂಸತ್ ಸಮರಕ್ಕೂ ಮುನ್ನ ಮತ್ತೆ ರಾಹುಲ್‌ಗಾಂಧಿ ಅವರನ್ನು ಜಿಲ್ಲೆಗೆ ಆಹ್ವಾನಿಸಲಾಗಿದೆ. ಅಂತೆಯೇ ಈ ಮೂಲಕ ಶಕ್ತಿ ಪ್ರದರ್ಶನಕ್ಕೂ ಕಾಂಗ್ರೆಸ್ ಪಾಳೆಯ ಸಜ್ಜಾಗಿದ್ದು, ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡಿದೆ.
ಎಚ್‌ಡಿಕೆ ಟಾರ್ಗೆಟ್ ನಿಶ್ಚಿತ
ಜಿಲ್ಲಾ ಕಾಂಗ್ರೆಸ್‌ನ ಇತಿಹಾಸದಲ್ಲಿ ನಿರೀಕ್ಷೆಗೂ ಮೀರಿದ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಇದೀಗ ಅದೇ ರೀತಿ 50 ಸಾವಿರಕ್ಕೂ ಹೆಚ್ಚು ಜನರನ್ನು ಜಮಾಯಿಸಿ ಮತ್ತೊಮ್ಮೆ ಶಕ್ತಿ ತೋರಿಸಲು ವೇದಿಕೆ ಸಿದ್ಧವಾಗಿದೆ. ಇದಲ್ಲದೆ ಪ್ರಮುಖವಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಲು ಕೈ ನಾಯಕರು ಸಜ್ಜಾಗಿದ್ದಾರೆ.
ಹಾಗೆ ನೋಡಿದರೆ ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶ ಪಕ್ಷಕ್ಕೆ ಫ್ಲಸ್ ಆಗಿತ್ತು. ಅಂದು ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿಕೊಂಡು ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸಿದ್ದರು. ಅಂತೆಯೇ ಈ ಬಾರಿಯೂ ಮುಂದುವರಿಸುವುದು ಖಚಿತ. ಪ್ರಮುಖವಾಗಿ ಮಹಿಳೆಯರ ಕುರಿತು ಎಚ್‌ಡಿಕೆ ಆಡಿರುವ ಮಾತುಗಳನ್ನೇ ಪ್ರಮುಖ ಅಸ್ತ್ರ ಮಾಡಿಕೊಳ್ಳಲಾಗುತ್ತಿದೆ.