ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ರೋಚಕ ಫಲಿತಾಂಶ ಹೊರಹೊಮ್ಮುತ್ತಿದೆ. ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರಾನೇರ ಹಣಾಹಣಿ ನಡೆಯಲಿದ್ದು, ಗ್ಯಾರಂಟಿ ಗುಂಗಿನಲ್ಲಿರುವ ಕೈ ಅಭ್ಯರ್ಥಿಯೋ ಅಥವಾ ಮೋದಿ ಮೇನಿಯಾದಲ್ಲಿ ತೇಲುತ್ತಿರುವ ಬಿಜೆಪಿ ಅಭ್ಯರ್ಥಿಯೋ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.
| ಜಗದೀಶ ಹೊಂಬಳಿ ಚಿಕ್ಕೋಡಿ
ಅಪಾರ ಪ್ರಮಾಣದ ಕಬ್ಬು ಬೆಳೆಯುವ ಪ್ರದೇಶ, ಹಲವು ಸಕ್ಕರೆ ಕಾರ್ಖಾನೆಗಳು, ಸಹಕಾರಿ ಸಂಘಗಳ ಗೊಂಚಲು, ಭಾಷಾ ವೈವಿಧ್ಯದ ನೆಲೆಯಾಗಿರುವ
2009ರ ಚುನಾವಣೆಗೂ ಮುನ್ನ ಚಿಕ್ಕೋಡಿ ಎಸ್ಸಿ ಮೀಸಲು ಕ್ಷೇತ್ರವಾಗಿತ್ತು. ಇದೇ ಕ್ಷೇತ್ರದಿಂದ ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಮೂರು ಸಲ ಸಂಸದರಾಗಿದ್ದರು. 2009ರ ನಂತರ ಈ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆ ಆಯಿತು. 2008ರಲ್ಲಿ ಅಮೋಘ ಗೆಲುವು ದಾಖಲಿಸಿದ್ದ ಬಿಜೆಪಿಯ ರಮೇಶ ಕತ್ತಿ, 2014ರ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಸೋತಿದ್ದರು. 2019ರ ಚುನಾವಣೆಯಲ್ಲಿ ರಮೇಶ ಕತ್ತಿಗೆ ಕೋಕ್ ನೀಡಿದ ಹೈಕಮಾಂಡ್ ಅಣ್ಣಾಸಾಹೇಬ ಜೊಲ್ಲೆಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ವಿರುದ್ಧ ಗೆಲುವು ಸಾಧಿಸಿದ್ದರು.
ಕತ್ತಿ, ಜೊಲ್ಲೆ ಮಧ್ಯೆ ತೀವ್ರ ಪೈಪೋಟಿ: ಕೇಂದ್ರ ಗೃಹಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆಗೆ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿಯೂ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈಗಾಗಲೆ ಚುನಾವಣೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ರಾಜ್ಯಸಭೆಗೆ ಅವಕಾಶ ನಿರಾಕರಿಸಿದರೂ ಡಾ. ಪ್ರಭಾಕರ್ ಕೋರೆ ಬಿಜೆಪಿ ಜತೆಗಿದ್ದಾರೆ. ಈ ಕಾರಣಕ್ಕೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ತಮ್ಮ ಪುತ್ರ ಅಮಿತ್ ಕೋರೆಗೆ ನೀಡುವಂತೆ ಹೈಕಮಾಂಡ್ಗೂ ಮನವಿ ಸಮರ್ಪಿಸಿದ್ದಾರೆ. ಸದ್ಯ ಅಣ್ಣಾಸಾಹೇಬ ಜೊಲ್ಲೆ ಮತ್ತು ರಮೇಶ ಕತ್ತಿ ಮಧ್ಯೆ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆದಿದೆ. ಕಾಂಗ್ರೆಸ್ನ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿಯೇನಿಲ್ಲ. ಲಕ್ಷ್ಮಣ ಸವದಿ ಅವರನ್ನು ಪುನಃ ಪಕ್ಷಕ್ಕೆ ಕರೆತಂದು, ಚಿಕ್ಕೋಡಿ ಟಿಕೆಟ್ ಕೊಡುವುದು ಅಥವಾ ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಬಿಜೆಪಿ ನಾಯಕರು ತೆರೆಮರೆ ಕಸರತ್ತು ನಡೆಸಿದ್ದಾರೆನ್ನಲಾಗಿದೆ. ರಮೇಶ ಕತ್ತಿ ಕೂಡ ಚಿಕ್ಕೋಡಿ ಅಥವಾ ಬೆಳಗಾವಿ ಟಿಕೆಟ್ ಕೊಡಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ಮತ ಲೆಕ್ಕಾಚಾರ
2019ರ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ 6,54,017 ಮತ ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ 5,26,140 ಮತ ಪಡೆದು 1,18.877 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕ್ಷೇತ್ರದಲ್ಲಿ 17,32,346 ಮತದಾರರಿದ್ದು, ಈ ಪೈಕಿ ಪುರುಷ ಮತದಾರರು 8,76,983, ಮಹಿಳಾ ಮತದಾರರು 8,55,292, ಇತರ 11 ಮತದಾರರಿದ್ದಾರೆ.
ಪ್ರಭಾವ ಬೀರುವ ಅಂಶಗಳು
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದು, ರಾಮಮಂದಿರ ನಿರ್ವಣ, ಮೋದಿ ಹವಾ, ಅನುದಾನ ಕೊರತೆ ಬಗ್ಗೆ ಕೈ ಶಾಸಕರ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿಗೆ ಪ್ಲಸ್ ಆಗಲಿವೆ. ಇನ್ನು ಗ್ಯಾರಂಟಿ ಯೋಜನೆಗಳು, ಕ್ಷೇತ್ರದ 8 ವಿಧಾನಸಭಾ ಸ್ಥಾನಗಳಲ್ಲಿ ಐವರು ಶಾಸಕರಿರುವುದು ಹಾಗೂ ಲಕ್ಷ್ಮಣ ಸವದಿ ಮತ್ತು ಬೆಂಬಲಿಗರ ಬಲ ಇರುವುದು ಕಾಂಗ್ರೆಸ್ಗೆ ಪ್ಲಸ್ ಆಗಲಿದೆ. ಬಿಜೆಪಿಗೆ ಮೋದಿ ಗ್ಯಾರಂಟಿಯಾದರೆ, ಕಾಂಗ್ರೆಸ್ಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಚುನಾವಣಾ ವಿಷಯ.
ಕಾಂಗ್ರೆಸ್ನಿಂದ ಕಾದು ನೋಡುವ ತಂತ್ರ
ಬೆಳಗಾವಿ ಜಿಲ್ಲೆಯ ರಾಜಕಾರಣ ಯಾವ ಸಂದರ್ಭದಲ್ಲಾದರೂ ಮಗ್ಗಲು ಬದಲಾಯಿಸಬಹುದು. ಇದು ಹೊಸದೇನಲ್ಲ. ಚಿಕ್ಕೋಡಿಯ ಬಿಜೆಪಿ ಟಿಕೆಟ್ಗಾಗಿ ರಮೇಶ ಕತ್ತಿ ಬಹಳ ಕಸರತ್ತು ನಡೆಸಿದ್ದಾರೆ. ರಮೇಶ ಕತ್ತಿಗೆ ಟಿಕೆಟ್ ಕೈತಪ್ಪಿದರೆ, ಕಾಂಗ್ರೆಸ್ನಿಂದ ಅವರನ್ನು ಕಣಕ್ಕಿಳಿಸಬೇಕು ಎಂದು ಕೈ ನಾಯಕರು ಕಾಯುತ್ತಿದ್ದಾರೆ. ಇತ್ತ ಕಾಂಗ್ರೆಸ್ ಟಿಕೆಟ್ಗಾಗಿ ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರೂ ಟಿಕೆಟ್ ಕೇಳದ ಪ್ರಕಾಶ ಹುಕ್ಕೇರಿ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಕಾಂಗ್ರೆಸ್ ಮುಂಖಡರಲ್ಲಿದೆ. ಅಂತಿಮವಾಗಿ ಬಿಜೆಪಿ ಟಿಕೆಟ್ ಯಾರಿಗೆ ಎಂದು ಖಾತ್ರಿ ಆಗುವವರೆಗೆ ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬಿಜೆಪಿ ಟಿಕೆಟ್ ಕೇಳಿರುವ ಮೂವರೂ ಪ್ರಬಲ ಲಿಂಗಾಯತ ನಾಯಕರನ್ನು ವಿಶ್ವಾಸಕ್ಕೆ ಪಡೆದು ಒಬ್ಬರಿಗೇ ಟಿಕೆಟ್ ಅಂತಿಮಗೊಳಿಸಬೇಕಾದ ಸಂದಿಗ್ದತೆಯಲ್ಲಿ ಬಿಜೆಪಿ ಇದೆ.
ಸದನದಲ್ಲಿ ಹಾಜರಾತಿ
ಸಂಸದ ಅಣ್ಣಾ ಸಾಹೇಬ ಜೊಲ್ಲೆ ಸಂಸತ್ ಕಲಾಪದಲ್ಲಿ ಹಾಜರಾತಿ ಶೇ. 73 ಇದೆ. 308 ಪ್ರಶ್ನೆಗಳನ್ನು ಕೇಳಿದ್ದಾರೆ. 9 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ನಲ್ಲೂ ಪೈಪೋಟಿ
ಚಿಕ್ಕೋಡಿ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲೂ ತೀವ್ರ ಪೈಪೋಟಿ ನಡೆದಿದ್ದು, ಐವರು ಆಕ್ಷಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಗಜಾನನ ಮಂಗಸೂಳಿ, ಸದಾಶಿವ ಬುಟಾಳೆ, ವಕೀಲರಾದ ಮಹೇಶ ಹಟ್ಟಿಹೊಳಿ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ. ಅವರೆಲ್ಲರ ಮಧ್ಯೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಕಣಕ್ಕಿಳಿಸಿ ಪ್ರಬಲ ಪೈಪೋಟಿ ನೀಡಬೇಕು ಎನ್ನುವುದು ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ. ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಕುರುಬ ನಾಯಕರಿಗೆ ಈ ಬಾರಿ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಲಕ್ಷ್ಮಣರಾವ್ ಚಿಂಗಳೆಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ.
ಕ್ಷೇತ್ರದ ಜನರ ಪಾಲಿಗೆ ಉಜ್ವಲಾ
ಸಂಸದ ಅಣ್ಣಾಸಾಹೇಬ ಜೊಲ್ಲೆ ಉಜ್ವಲಾ ಯೋಜನೆಯ ಮೂಲಕ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದಾರೆ. ಕ್ಷೇತ್ರದಲ್ಲಿ ಚತುಷ್ಪಥ, ಅಷ್ಪಪಥ ಹೆದ್ದಾರಿ ನಿರ್ವಣಕ್ಕೆ ವಿಶೇಷ ಶ್ರಮ ವಹಿಸಿದ್ದಾರೆ. 264 ಗ್ರಾಮ ಪಂಚಾಯಿತಿಗಳ ಒಟ್ಟು 502 ಹಳ್ಳಿಗಳಿಗೆ ಜಲಜೀವನ ಮಿಷನ್ ಕುಡಿಯುವ ನೀರಿನ ಯೋಜನೆ ಮೂಲಕ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಉಗಾರ ಖುರ್ದ, ಕುಡಚಿ, ರಾಯಬಾಗ, ಶೇಡಬಾಳ, ಬೆಲ್ಲದ ಬಾಗೇವಾಡಿ ರೈಲ್ವೆ ನಿಲ್ದಾಣಗಳನ್ನು ನವೀಕರಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 130 ಡಿಜಿಟಲ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದ್ದು, ಕೇಂದ್ರದ ಯೋಜನೆಗಳ ಮಾಹಿತಿ ಲಭ್ಯವಾಗುತ್ತಿದೆ. 3,200 ಕೋಟಿ ರೂ. ಅನುದಾನ ತಂದು ಹೆದ್ದಾರಿ ಕಾಮಗಾರಿ ಮಾಡಿಸಿದ್ದಾರೆ. 697 ಕೋಟಿ ರೂ. ವೆಚ್ಚದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ. 74 ಕೋಟಿ ರೂ. ಮುಜರಾಯಿ ಮತ್ತು ವಕ್ಪ್ ಅನುದಾನ ತಂದಿದ್ದಾರೆ. 11 ಹೈಟೆಕ್ ಆಂಬುಲೆನ್ಸ್ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ. 2 ಕೋಟಿ ರೂ. ವೈದ್ಯಕೀಯ ಚಿಕಿತ್ಸಾನಿಧಿ, 17 ಕೋಟಿ ರೂ. ಸಂಸದ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಬಿಡುಗಡೆಯಾಗಿದ್ದು, 16.77 ಕೋಟಿ ರೂ. ಬಳಕೆಯಾಗಿದೆ.