ಜಿಲ್ಲೆ

ಲೋಕಸಭಾ ಚುನಾವಣೆ 2024: ಕುಂದಾ ಸವಿಯಲು ಕೈ-ಕಮಲ ಕದನ

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾದರೂ ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ತೀವ್ರ ಪೈಪೋಟಿ ಗಮನಿಸಿದರೆ ಈ ಬಾರಿಯೂ ಅಖಾಡ ರಂಗೇರುವುದು ಖಚಿತ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲೂ ಟಿಕೆಟ್ ಆಕಾಂಕ್ಷಿಗಳ ದಂಡೇ ಇದ್ದು, ಉಭಯ ಪಕ್ಷಗಳ ಅಭ್ಯರ್ಥಿ ಘೊಷಣೆ ಬಳಿಕ ಕಣ ರೋಚಕವಾಗಿರಲಿದೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ರಾಜ್ಯ ರಾಜಕಾರಣದ ಪರೋಕ್ಷ ‘ಶಕ್ತಿಕೇಂದ್ರ’ ಬೆಳಗಾವಿಯು ತಜ್ಞರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿ ಊಹಿಸಲಸಾಧ್ಯ ಫಲಿತಾಂಶ ನೀಡಬಲ್ಲ ರಾಜಕೀಯ ಪ್ರಯೋಗಶಾಲೆ. ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ವಿಸ್ತೀರ್ಣದಂತೆ ರಾಜಕೀಯದಲ್ಲೂ ‘ದೊಡ್ಡಸ್ಥಿಕೆ’ ಉಳಿಸಿಕೊಂಡಿದೆ ಸಕ್ಕರೆ ನಾಡು. ಇಲ್ಲಿ ಪಕ್ಷ ರಾಜಕೀಯಕ್ಕಿಂತ ವೈಯಕ್ತಿಕ ವರ್ಚಸ್ಸಿಗೆ ಮಣೆ ಹಾಕಲಾಗುತ್ತದೆ. ಒಂದೇ ಪಕ್ಷದಲ್ಲಿದ್ದರೂ ಅಲ್ಲಲ್ಲೇ ಎರಡು ಬಣಗಳಿರುವುದು ವಿಶೇಷತೆ. ಬೆಳಗಾವಿ

ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಸದ್ಯ ಬಿಜೆಪಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಕ್ಟಿವ್ ಆಗಿದ್ದರೆ, ಈ ಸಲ ಟಿಕೆಟ್ ಅನುಮಾನ ಎನ್ನುವಂತಿದ್ದ ಹಾಲಿ ಸಂಸದೆ ಮಂಗಲ ಅಂಗಡಿ ಅವರಿಗೆ ಬೀಗರಾದ ಜಗದೀಶ ಶೆಟ್ಟರ್ ಪಕ್ಷಕ್ಕೆ ಮರಳಿರುವುದು ಬಲ ತಂದಿದೆ. ಕಾಂಗ್ರೆಸ್ ಟಿಕೆಟ್​ಗಾಗಿ 12ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ದಾಖಲಿಸಿದ್ದಾರಾದರೂ ಟಿಕೆಟ್ ಯಾರಿಗೆ ಎನ್ನುವುದು ಖಚಿತವಾಗುತ್ತಿಲ್ಲ. ಉಪಚುನಾವಣೆಯಲ್ಲಿ ಅತ್ಯಲ್ಪ ಅಂತರದಲ್ಲಿ ಸೋತಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮತ್ತೊಂದು ಬಾರಿ ಹೈಕಮಾಂಡ್ ಮಣೆ ಹಾಕಲು ಪ್ರಯತ್ನ ಮಾಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದ್ದರೂ ಸತೀಶ್ ಮಾತ್ರ ಬಹಿರಂಗವಾಗಿ ಸ್ಪರ್ಧೆ ಬಗ್ಗೆ ಮಾತನಾಡಿಲ್ಲ. ಪುತ್ರ ಮೃಣಾಲ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕೆಂದು ಜನ ಬಯಸುತ್ತಿದ್ದಾರೆ ಎನ್ನುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ ಟಿಕೆಟ್ ಕೊಡಿಸುವ ಅಂತರಾಳದ ಬಯಕೆ ಹೊರಹಾಕಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್​ನಲ್ಲಿ ವೈದ್ಯ ಡಾ.ಗಿರೀಶ ಸೋನವಾಲ್ಕರ್, ಸುಪ್ರೀಂಕೋರ್ಟ್ ವಕೀಲ ಮೋಹನ ಕಾತರಕಿ, ಉದ್ಯಮಿ ಕಿರಣ ಸಾಧುನವರ ಹೆಸರುಗಳು ಮುಂಚೂಣಿಯಲ್ಲಿವೆ. ಒಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿಗಳ ನಡುವೆ ಯಾರೇ ಸ್ಪರ್ಧಿಸಿದರೂ ಈ ಬಾರಿ ಹೊಂದಾಣಿಕೆ ರಾಜಕಾರಣ ಹಾಗೂ ಬಣ ರಾಜಕಾರಣದ್ದೇ ಗೆಲುವು ಎನ್ನಲಾಗುತ್ತಿದೆ.

ಮರಾಠಿಗರು ನಿರ್ಣಾಯಕ

ಬೆಳಗಾವಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 19,89,345 ಮತದಾರರು ಇದ್ದಾರೆ. ಆ ಪೈಕಿ 6.50 ಲಕ್ಷಕ್ಕೂ ಅಧಿಕ ಅಹಿಂದ ವರ್ಗದ ಮತದಾರರಿದ್ದಾರೆ. ನಂತರದ ಸ್ಥಾನದಲ್ಲಿ ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತದಾರರಿದ್ದಾರೆ. ಅಭ್ಯರ್ಥಿಗಳ ಗೆಲುವಿನಲ್ಲಿ ಮರಾಠಿ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಪ್ರಭಾವ ಬೀರುವ ಅಂಶಗಳು

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳ ಮಧ್ಯೆ ಹಿಂದುತ್ವ ಹವಾ ಕೂಡ ಇದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿ, ಜನಪರ ಯೋಜನೆಗಳಿಗಿಂತ ಧಾರ್ವಿುಕ ವಿಷಯಗಳೇ ಹೆಚ್ಚು ಸದ್ದು ಮಾಡುತ್ತಿವೆ. ಅಲ್ಲದೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯು ಫಲಿತಾಂಶದ ಮೇಲೆ ಹೆಚ್ಚುವ ಪ್ರಭಾವ ಬೀರುವ ಸಾಧ್ಯತೆಯಿದೆ. ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದರೆ ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದರೂ ಅಚ್ಚರಿ ಪಡಬೇಕಿಲ್ಲ ಎಂಬುದು ಕ್ಷೇತ್ರದಲ್ಲಿ ಬಲವಾಗಿ ಕೇಳಿಬರುತ್ತಿರುವ ಅಭಿಪ್ರಾಯ.

ಸಚಿವರಿಗೆ ಅಗ್ನಿಪರೀಕ್ಷೆ

ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಲೋಕಸಭೆಯಲ್ಲಿ ಗೆಲ್ಲಲೇಬೇಕು ಎಂದು ಕೈ ವರಿಷ್ಠರು ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

ಸದನದಲ್ಲಿ ಹಾಜರಾತಿ

ಸಂಸದೆ ಮಂಗಲ ಅಂಗಡಿ ಸಂಸತ್ ಕಲಾಪದಲ್ಲಿ ಶೇ.94 ಹಾಜರಾತಿ ಹೊಂದಿದ್ದಾರೆ.

ಅಂಗಡಿ ಪಾರುಪತ್ಯ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತತ 11 ಬಾರಿ ಕಾಂಗ್ರೆಸ್ ಗೆದ್ದಿದೆ. 1996ರಲ್ಲಿ ಒಮ್ಮೆ ಜನತಾದಳ ಗೆದ್ದರೆ 1998ರಲ್ಲಿ ರೈತ ನಾಯಕ ಬಾಬಾಗೌಡ ಪಾಟೀಲ ರೈತ ಸಂಘದಿಂದ ಗೆಲುವು ಸಾಧಿಸಿದ್ದರು. 1999ರಲ್ಲಿ ಕಾಂಗ್ರೆಸ್​ನಿಂದ ಅಮರಸಿಂಹ ಪಾಟೀಲ ಗೆದ್ದಿದ್ದರು. 2004ರಿಂದ 2019ರ ವರೆಗೆ ಸತತ ನಾಲ್ಕು ಬಾರಿ ದಿ.ಸುರೇಶ ಅಂಗಡಿ ಗೆಲುವು ಸಾಧಿಸಿದ್ದರು. ಅವರ ಅಕಾಲಿಕ ಅಗಲಿಕೆ ನಂತರ ನಡೆದ 2021ರ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಪತ್ನಿ ಮಂಗಲ ಅಂಗಡಿ ಅಲ್ಪ ಅಂತರದ ಗೆಲುವು ದಾಖಲಿಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಒಟ್ಟು ಐದು ಬಾರಿ ಗೆಲುವು ದಾಖಲಿಸಿದೆ.

ಮತ ಲೆಕ್ಕಾಚಾರ

2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಂಗಲ ಅಂಗಡಿ 4,40,327 ಮತ ಪಡೆದು 5,240 ಮತಗಳ ಅಂತರದಿಂದ ಗೆದ್ದಿದ್ದರು. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 4,35,087 ಮತ ಪಡೆದಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ 1,17,174 ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು.

ಯೋಜನೆ ಅನುಷ್ಠಾನ ಪ್ರಯತ್ನವೇ ಸಾಧನೆ!

ಸಂಸದೆ ಮಂಗಲ ಅಂಗಡಿ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದರ ಜತೆಗೆ ರೈಲ್ವೆ ಯೋಜನೆಗಳ ಅನುಷ್ಠಾನ, ಕಾಮಗಾರಿ ಆರಂಭಿಸಲು ನಿರಂತರ ಪ್ರಯತ್ನಿಸಿದ್ದಾರೆ. ಅಮೃತ್ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ಮತ್ತು ಗೋಕಾಕ ರೋಡ್ ರೈಲ್ವೆ ನಿಲ್ದಾಣಗಳ ಮರು ನಿರ್ವಣದ 36 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ದೊರಕಿದೆ. ಬೆಳಗಾವಿ ಸಿಕಂದರಾಬಾದ್-ಬೆಳಗಾವಿ ವಿಶೇಷ ಎಕ್ಸ್​ಪ್ರೆಸ್

ರೈಲ್ವೆ ಸಂಚಾರಕ್ಕೆ ಚಾಲನೆ ಲಭಿಸಿದೆ. 2023ರಲ್ಲಿಯೇ ಬೆಳಗಾವಿ-ಮೈಸೂರು-ಬೆಳಗಾವಿ ವಿಶೇಷ ಎಕ್ಸ್​ಪ್ರೆಸ್ ರೈಲಿಗೆ, ಬೆಳಗಾವಿ-ಧಾರವಾಡ-ಬೆಳಗಾವಿ ನೂತನ ವಿಶೇಷ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಗಿದೆ. 2024ರ ಫೆ.17ರಂದು ಬೆಳಗಾವಿಯಿಂದ ಅಯೋಧ್ಯೆಗೆ ತೆರಳಲು ವಿಶೇಷ ರೈಲು ವ್ಯವಸ್ಥೆ. ಬೆಳಗಾವಿ ರೈಲ್ವೆ ನಿಲ್ದಾಣ ಸುಮಾರು 210 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ. ನಗರದ ಟಿಳಕವಾಡಿ 3ನೇ ರೈಲ್ವೆ ಗೇಟ್ ಹತ್ತಿರ ನಿರ್ವಿುಸಿದ ನೂತನ ರಸ್ತೆ ಮೇಲ್ಸೇತುವೆ ಉದ್ಘಾಟನೆ ಮಾಡಲಾಗಿದ್ದು, 2ನೇ ಲೇನ್ ಕಾಮಗಾರಿಯು ಪ್ರಗತಿಯಲ್ಲಿದೆ. ಬೆಳಗಾವಿ ವಿಮಾನ ನಿಲ್ದಾಣ ನೂತನ ಟರ್ವಿುನಲ್ ನಿರ್ವಣಕ್ಕೆ ವಿಮಾನಯಾನ ಸಚಿವಾಲಯದಿಂದ ಒಪ್ಪಿಗೆ ದೊರೆತಿದೆ.