ಮೈಸೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡ ಪ್ರಸಕ್ತ ವರ್ಷದ ಕೊನೆಯ ಲೋಕ ಅದಾಲತ್‌ನಲ್ಲಿ ಒಟ್ಟು 4,282 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 29 ಜೋಡಿ ಅದಾಲತ್‌ನಲ್ಲಿ ವೈಮನಸ್ಸು ಮರೆತು ದಾಂಪತ್ಯ ಜೀವನ ಮುಂದುವರೆಸಲು ನಿರ್ಧರಿಸಿದ್ದಾರೆ.
ನ್ಯಾಯಾಲಯದಲ್ಲಿ ಒಟ್ಟು 1,12,756 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಲಾಗಿತ್ತು. ಈ ಪೈಕಿ 20,838 ಅರ್ಜಿಗಳು ಸ್ವೀಕೃತವಾಗಿ 4,282 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೈಸೂರು ತಾಲೂಕಿನ 20, ತಿ.ನರಸೀಪುರ, ಪಿರಿಯಾಪಟ್ಟಣದ ತಲಾ 2, ನಂಜನಗೂಡು, ಹುಣಸೂರಿನ ತಲಾ 1, ಎಚ್.ಡಿ. ಕೋಟೆಯ 3 ಜೋಡಿಗಳು ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದು ಒಂದಾಗಿದ್ದಾರೆ. ಒಟ್ಟು 94 ಜೀವನಾಂಶ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.
ಸಾಕಷ್ಟು ಜೋಡಿಗಳು ಸಣ್ಣಪುಟ್ಟ ಕಾರಣಗಳಿಗೋಸ್ಕರ ವಿಚ್ಛೇದನ ಪಡೆಯಲು ಬರುತ್ತಾರೆ. ಕೆಲವರು ಎಂಟು, ಹತ್ತು ವರ್ಷ ಒಟ್ಟಿಗೆ ಬಾಳಿ ನಂತರ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ವಿಚ್ಛೇದನವನ್ನು ನ್ಯಾಯಾಲಯದಲ್ಲಿ ಸುಲಭವಾಗಿ ಪಡೆಯಬಹುದು. ಆದರೆ, ವಿಚ್ಛೇಧನ ಪಡೆದ ನಂತರ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಗಂಡು, ಹೆಣ್ಣು ಎದುರಿಸಬೇಕಾಗುತ್ತದೆ. ಹೀಗಾಗಿ ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ತ್ಯಾಗಳನ್ನು ಮಾಡಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೇಲಾಕೋಡೆ, ರೊಡಾಲ್ಫ್ ಫೆರೇರಾ, ಗಿರೀಶ್ ಭಟ್, ರಮೇಶ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಹಾಗೂ ಇತರರು ಇದ್ದರು.