ಚನ್ನಗಿರಿ: ಕಾನೂನು ಎಷ್ಟೇ ಬಿಗಿಯಾದರೂ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ, ಜನರಲ್ಲಿ ಕಾನೂನಿನ ಅರಿವು ಮೂಡಿಸಿದಲ್ಲಿ ಸ್ವಲ್ಪಮಟ್ಟಿಗೆ ಅಪರಾಧ ಅಗುವುದನ್ನು ತಡೆಗಟ್ಟಬಹುದು ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಸಿದ್ದಲಿಂಗಯ್ಯ ಗಂಗಾಧರ ಮಠ ಅಭಿಪ್ರಾಯಪಟ್ಟರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ಉದ್ದೇಶಿಸಿ ಶನಿವಾರ ಮಾತನಾಡಿದರು.
ಜನಿಸಿದ ದಿನದಿಂದ ಸಾಯುವವರೆಗೆ ಕಾನೂನಿನ ಅಡಿ ಎಲ್ಲರೂ ಬದುಕಬೇಕು. ಅದಕ್ಕಾಗಿ ಜೀವನಕ್ಕೆ ಹತ್ತಿರವಾದ ಸಾಮಾನ್ಯ ಕಾನೂನಿನ ಅರಿವು ಇದ್ದಲ್ಲಿ ತಪ್ಪುಗಳಾಗುವ ಸಾಧ್ಯತೆ ವಿರಳ. ಅನೇಕರು ಸಣ್ಣಪುಟ್ಟ ಕಾರಣಗಳಿಗೆ ನ್ಯಾಯಾಲಯಕ್ಕೆ ಹೋಗುತ್ತಾರೆ. ಇದರಿಂದ ಸಮಯ, ಹಣ ಎಲ್ಲವೂ ವ್ಯರ್ಥ. ಜೀವನದ ನೆಮ್ಮದಿ ಸಹ ಹಾಳಾಗಲಿದೆ ಎಂದು ವಿವರಿಸಿದರು.
ಅದರ ಬದಲು ಸಾಮಾನ್ಯ ಕಾನೂನು ತಿಳಿದು ಜೀವನ ನಡೆಸಿದರೆ ಜೀವನದಲ್ಲಿ ಯಾವ ಸಮಸ್ಯೆಗಳು ಬರಲಾರದು ಎಂದರು.
ನ್ಯಾಯಾಲಯಗಳಲ್ಲಿ ವ್ಯಾಜ್ಯಗಳಿಗಾಗಿ ದಾವೆ ಹಾಕಿಕೊಂಡು ವರ್ಷಗಟ್ಟಲೇ ತಿರುಗುವ ಬದಲಿಗೆ ನ್ಯಾಯಾಲಯ ನಡೆಸುವಂತ ಅದಾಲತ್‌ಗಳಲ್ಲಿ ರಾಜಿ ಮಾಡಿಕೊಂಡು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು. ನ್ಯಾಯ ಸಿಗುತ್ತದೆ ಎಂದು ಮಾಡುವ ಕೆಲಸ ಮರೆತು ಹಣ, ಸಮಯ, ನೆಮ್ಮದಿ ಹಾಳು ಮಾಡಿಕೊಳ್ಳುವುದು ಸರಿಯಲ್ಲವೆಂದರು.
ನ್ಯಾಯಲಯದಲ್ಲಿ ಬಾಕಿ ಇರುವ 2498 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ 1488 ಪ್ರಕರಣಗಳು ರಾಜಿಯಾದವು. ವಿವಿಧ ಪ್ರಕರಣಗಳಿಂದ 1.80 ಕೋಟಿ ರೂ. ಸಂಗ್ರಹವಾಯಿತು.
ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮೂಗತಿ, 1ನೇ ಕಿರಿಯ ಸಿವಿಲ್ ನ್ಯಾಯಾಧೀಶೆ ಶಮ ಶ್ರೀವತ್ಸ, 2ನೇ ಸಿವಿಲ್ ನ್ಯಾಯಾಧೀಶೆ ಮಹಾಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಎಲ್. ನಾಗನಾಯ್ಕ ಇದ್ದರು.
ಸಿಹೆಚ್‌ಎನ್ 01 ಲೋಕ ಅದಾಲತ್ 09 ಸೆ
ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಎಲ್. ನಾಗನಾಯ್ಕ ಮತ್ತಿತರರಿದ್ದರು.