ಮಡಿಕೇರಿ: ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಜು.೮ ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಡಿ.ಟಿ.ಪುಟ್ಟರಂಗಸ್ವಾಮಿ ಮನವಿ ಮಾಡಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಾಧೀಶರು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ತಕ್ಷಣ ಪರಿಹಾರ ಪಡೆದುಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸುವರ್ಣ ಅವಕಾಶವಾಗಿದೆ. ಲೋಕ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿತ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಸೇರಿದಂತೆ ಇತ್ಯಾದಿ ಪ್ರಕಟಣಗಳು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಜೂ.೧ ಕ್ಕೆ ಕೊನೆಗೊಂಡಂತೆ ೧೮,೧೭೫ ವಿವಿಧ ಪ್ರಕರಣಗಳು ದಾಖಲಾಗಿದ್ದು, ೩,೦೩೧ ರಾಜೀಯಾಗಬಲ್ಲ ಪ್ರಕರಣಗಳು ಇವೆ. ಜತೆಗೆ ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಧಾನದ ಮೂಲಕ ೨,೬೩೫ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸಮಯ, ವೆಚ್ಚ ಮತ್ತು ನ್ಯಾಯದಾನಕ್ಕಾಗಿ ರಾಷ್ಟ್ರೀಯ ಲೋಕ ಅದಾಲತ್ ಅವಕಾಶವನ್ನು ಅರ್ಹರು ಪಡೆದುಕೊಳ್ಳಬೇಕು ಎಂದ ಅವರು, ಈ ಹಿಂದೆ ಫೆ.೧೧ ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಸಂದರ್ಭದಲ್ಲಿ ೧,೨೯೫ ಪ್ರಕರಣಗಳು ಬಾಕಿ ಇದ್ದವು, ಜತೆಗೆ ೪,೯೦೨ ವ್ಯಾಜ್ಯ ಪೂರ್ವ ಪ್ರಕರಣಗಳು ಒಟ್ಟು ೬,೧೯೭ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.
ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ.೫೦ ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಜಯಲಕ್ಷ್ಮಿ, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಎನ್.ಎ.ನಾಗೇಶ್ ಇದ್ದರು.
೬ಆದರ್ಶ್‌ಕೆಡಿಜಿಎ೮: ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಟಿ.ಪುಟ್ಟರಂಗಸ್ವಾಮಿ ಮಾತನಾಡಿದರು. ಕೆ.ಬಿ.ಪ್ರಸಾದ್, ಜಯಲಕ್ಷ್ಮಿ, ಎನ್.ಎ.ನಾಗೇಶ್ ಇದ್ದರು.