ಮಡಿಕೇರಿ:
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ 'ಮುದ್ದಂಡ ಹಾಕಿ ನಮ್ಮೆ'ಯ ಲಾಂಛನ ಶುಕ್ರವಾರ ಬಿಡುಗಡೆ ಆಗುವುದರೊಂದಿಗೆ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾದಂತಾಗಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಕಿ ಹಬ್ಬದ ಲಾಂಛನ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೊಡವ ಹಾಕಿ ಹಬ್ಬ ಗಿನ್ನಿಸ್ ದಾಖಲೆ ಮಾಡುವುದರ ಮೂಲಕ ವಿಶ್ವವಿಖ್ಯಾತಿ ಆಗಿದೆ. ಕೊಡವ ಸಮುದಾಯದವರು ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳು, ಸೇನೆ ಹಾಗೂ ಇತರ ಪ್ರಮುಖ ಕ್ಷೇತ್ರಗಳಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯ. ಈ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ. ಕೊಡವ ಹಾಕಿ ನಮ್ಮೆ ಇದಕ್ಕೆ ಪೂರಕವಾಗುವ ವಾತಾವರಣ ಸೃಷ್ಟಿಸುವಂತಾಗಲಿ.
ಕೊಡವ ಸಮುದಾಯ ಮತ್ತು ಕೌಟುಂಬಿಕ ಹಾಕಿ ಪಂದ್ಯಾವಳಿ ಬಗ್ಗೆ ಬಗ್ಗೆ ರಾಜ್ಯಸಭೆ ಸದಸ್ಯ ಅಜಯ್ ಮಕೇನ್ ಗಮನ ಸೆಳೆಯಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಳಾವಕಾಶ ಒದಗಿಸಿದರೆ ಸಂಸದರ ನಿಧಿಯಿಂದ ಅತ್ಯಾಧುನಿಕ ಕ್ರೀಡಾ ತರಬೇತಿ ಸಂಸ್ಥೆ ಆರಂಭಿಸುವ ಭರವಸೆ ನೀಡಿದ್ದಾರೆ. ಈ ಸಂಬAಧ ಜಿಲ್ಲಾಧಿಕಾರಿ ಜತೆ ಸೇರಿ ಜಾಗ ಹುಡುಕುವ ಕೆಲಸ ಮಾಡಲಾಗಿದೆ. ಕೊಡಗು ಮತ್ತು ಕೊಡವರು ರಾಷ್ಟçಮಟ್ಟದಲ್ಲಿ ಗಮನ ಸೆಳೆಯಲು ಇಲ್ಲಿಯ ಕ್ರೀಡೆಯೇ ಕಾರಣ. ಹಾಕಿ ಮೂಲಕ ಇಡೀ ಜಗತ್ತಿಗೆ ಕೊಡವ ಸಮುದಾಯದ ಪರಿಚಯ ಆಗಿ ಪ್ರೀತಿ ಗಳಿಸಿದೆ. ಈ ಪ್ರೀತಿ ಕಳೆದುಕೊಳ್ಳುವ ವರ್ತನೆ ನಮ್ಮದಾಗಬಾರದು. ಕ್ರೀಡೆಯ ಮೂಲಕ ಎಲ್ಲರ ಬಾಂಧವ್ಯ ಉಳಿಸಿಕೊಳ್ಳ್ಳುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹ ಕೊಡುವುದು ಎಲ್ಲರ ಕರ್ತವ್ಯ. ಹಾಗಾಗಿ 'ಮುದ್ದಂಡ ಹಾಕಿ ನಮ್ಮೆ'ಯ ಯಶಸ್ಸಿಗಾಗಿ ಎಲ್ಲಾ ಸಹಕಾರ ಕೊಡಲಾಗುವುದು. ಶ್ರೇಷ್ಠ ಪರಂಪರೆಯಿAದ ಕೊಡಗು ಮತ್ತು ಮೈಸೂರಿಗೆ ಹೆಸರು ಬಂದಿದೆ. ಇದು ಉಳಿಸಿಕೊಳ್ಳಬೇಕು. ಪರಂಪರೆ ಆಧಾರದಲ್ಲಿ ಎಲ್ಲರೂ ಮುಂದುವರಿಯಬೇಕು. ಪ್ರಕೃತಿ ಮತ್ತು ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕು ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಾಕಷ್ಟು ವರ್ಷಗಳ ನಂತರ ಮಡಿಕೇರಿಯಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಹಾಗಾಗಿ ಇದಕ್ಕೆ ಎಲ್ಲರ ಸಹಕಾರ ಅಪೇಕ್ಷಿಸಲಾಗಿದೆ. ಕಳೆದ ಬಾರಿಯ ದಾಖಲೆ ಮುರಿಯುವ ನಿರೀಕ್ಷೆ ಇದೆ. ರಾಜಕೀಯ ಏನೇ ಇದ್ದರೂ ಕ್ರೀಡೆ ಮುಖಾಂತರ ಒಗ್ಗಟ್ಟು ಮೂಡುವಂತಾಗಲಿ ಎಂದು ಹಾರೈಸಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ 2008ಲ್ಲಿ ಸರ್ಕಾರದಿಂದ ಮೊದಲ ಬಾರಿಗೆ 5 ಲಕ್ಷ ರೂ. ಅನುದಾನ ಬಂತು. ಇದು ಈಗಲೂ ಮುಂದುವರಿದಿದೆ. ಈ ಬಾರಿ ಅನುದಾನದ ಮೊತ್ತ ಹೆಚ್ಚಾಗಬೇಕು. ಕನಿಷ್ಠ 1.5 ಕೋಟಿ ರೂಪಾಯಿ ಸರ್ಕಾರ ಕೊಡಬೇಕು. ಕ್ರೀಡಾಕೂಟ ನೆನಪಿನಲ್ಲಿ ಉಳಿಯಲು ಎಲ್ಲರ ಸಹಕಾರ ಬೇಕು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವುದರಿಂದ ಸ್ಮರಣೀಯ ಪಂದ್ಯಾವಳಿ ನಡೆಯಬೇಕು ಎಂದು ಆಶಿಸಿದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ, ನಮ್ಮ ತಂದೆ ಕೊಡವ ಹಾಕಿ ಪಂದ್ಯಾವಳಿ ಆರಂಭಿಸಿದಾಗ ಈ ಮಟ್ಟಕ್ಕೆ ಬೆಳೆಯುತ್ತದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಕಳೆದ ವರ್ಷ ನಾಪೋಕ್ಲುವಿನಲ್ಲಿ ಕುಂಡ್ಯೋಳAಡ ಕುಟುಂಬಸ್ಥರು ಚಿಕ್ಕ ಕುಟುಂಬವಾದರೂ ನೆನಪಿನಲ್ಲಿ ಉಳಿಯುವಂತೆ ಪಂದ್ಯಾವಳಿ ನಡೆಸಿಕೊಟ್ಟಿದ್ದಾರೆ. ಕುಟುಂಬದಲ್ಲಿ ಒಗ್ಗಟ್ಟು ಇದ್ದರೆ ಹೇಗೆ ಕ್ರೀಡಾಕೂಟ ನಡೆಸಬಹುದು ಎನ್ನುವುದಕ್ಕೆ ಅವರು ಉದಾಹರಣೆ ಆಗಿದ್ದಾರೆ. ಅದೇ ಮಾದರಿಯಲ್ಲಿ ಈ ಬಾರಿಯ ಮುದ್ದಂಡ ಹಾಕಿ ಹಬ್ಬವೂ ಯಶಸ್ವಿಯಾಗಲಿದೆ ಎಂದರು.
ಮುದ್ದಂಡ ಕುಟುಂಬದ ಪಟ್ಟೆದಾರ ಮುದ್ದಂಡ ಡಾಲಿ ತಿಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ಶಾಂತೆಯAಡ ವೀಣಾ ಅಚ್ಚಯ್ಯ, ಮುದ್ದಂಡ ಹಾಕಿ ನಮ್ಮೆ ಗೌರವಾಧ್ಯಕ್ಷ ಮುದ್ದಂಡ ಬಿ. ದೇವಯ್ಯ, ಉಪಾಧ್ಯಕ್ಷರಾದ ಡೀನ್ ಬೋಪಯ್ಯ, ಅಶೋಕ್, ಖಜಾಂಚಿ ಕಿರಣ್ ಪೂಣಚ್ಚ, ಜಂಟಿ ಕಾರ್ಯದರ್ಶಿಗಳಾದ ರಂಜಿತ್ ಪೊನ್ನಪ್ಪ, ಚೆಂಗಪ್ಪ, ಜಂಟಿ ಖಜಾಂಚಿ ದಿವ್ಯಾ ಮತ್ತಿತರರು ಇದ್ದರು.