ಜಿಲ್ಲೆ

ಲಾಕ್‌ಡೌನ್ ಉಲ್ಲಂಘನೆ; ಬಳ್ಳಾರಿ ಜಿಲ್ಲೆಯಲ್ಲಿ 850 ವಾಹನಗಳ ಜಪ್ತಿ, 20 ಜನರ ವಿರುದ್ಧ ಪ್ರಕರಣ

ಬಳ್ಳಾರಿ: ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದ 800 ದ್ವಿಚಕ್ರ ವಾಹನ ಹಾಗೂ 50 ಇತರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಶೇ.80 ಜನರಿಂದ ಉತ್ತಮ ಸಹಕಾರ ಸಿಗುತ್ತಿದೆ. ಅನಗತ್ಯವಾಗಿ ಹೊರಬಂದಿದ್ದ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಅಂತರ ಜಿಲ್ಲೆ ಹಾಗೂ ಅಂತಾರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ವಾಹನಗಳ ಜತೆಗೆ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆಂಧ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಸಿ.ಕೆ.ಬಾಬಾ ತಿಳಿಸಿದರು.

ಪೊಲೀಸ್ ಇಲಾಖೆಯಿಂದಲೂ ಕರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದೆಹಲಿ ಜಮಾತ್‌ನಲ್ಲಿ ಪಾಲ್ಗೊಂಡವರು ತಪಾಸಣೆಗೆ ಹಾಜರಾಗಬೇಕೆಂದು ನೀಡಿದ್ದ ಸೂಚನೆಗೆ ಅನೇಕರು ಸ್ಪಂದಿಸಿದ್ದಾರೆ. ಕೆಲವರು ಹೊರರಾಜ್ಯಗಳಲ್ಲಿದ್ದು, ಈ ಬಗ್ಗೆ ಆಯಾ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಬಿಎಸ್‌ಎಫ್‌ನ ಒಬ್ಬ ನೌಕರ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಪೊಲೀಸ್ ಇಲಾಖೆಯವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ ಎಂದು ಎಸ್ಪಿ ಬಾಬಾ ಮಾಹಿತಿ ನೀಡಿದರು.