ಜಿಲ್ಲೆ

ಬಡವರಿಂದ ದೂರಾದ ಇಂದಿರಾ ಕ್ಯಾಂಟೀನ್

ಬೆಳಗಾವಿ: ಬಡವರಿಗೆ, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಕಲ್ಪಿಸುವ ಉದ್ದೇಶದಿಂದ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗಳು ಇದೀಗ ಜನರಿಂದಲೇ ದೂರವಾಗುತ್ತಿವೆ.

ಲಾಕ್‌ಡೌನ್ ಸಂದರ್ಭದಲ್ಲಿ ಯಾರೂ ಉಪವಾಸ ಇರಬಾರದೆಂದು ಕ್ಯಾಂಟೀನ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಗ್ರಾಹಕರ ಕೊರತೆ, ಇನ್ನಿತರರ ಸಮಸ್ಯೆ ಮುಂದಿಟ್ಟುಕೊಂಡು ಇದೀಗ ಎಲ್ಲ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಆದರೆ, ಹೆಸರಿಗೆ ಮಾತ್ರ ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಸಿಗಲಿದೆ ಎಂಬ ನಾಮಫಲಕ ಹಾಕಲಾಗಿದೆ.

ಸದ್ಯ ನಗರದ ಹಳೆ ಪಿಬಿ ರಸ್ತೆಯಲ್ಲಿದ್ದ ಬಾಜಿ ಮಾರ್ಕೆಟ್ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ಸಾರಿಗೆ ಕಾಂಪೌಂಡ್‌ನಲ್ಲಿರುವ, ಆಜಂ ನಗರ, ಜಿಲ್ಲಾಸ್ಪತ್ರೆ ಆವರಣ, ಮಹಾಂತೇಶ ನಗರ, ಎಪಿಎಂಸಿ ರಸ್ತೆ, ಬಸವೇಶ್ವರ ವೃತ್ತದ ಬಳಿ ಪಾಲಿಕೆ ಮಳಿಗೆ ಆವರಣದಲ್ಲಿರುವ ಕ್ಯಾಂಟೀನಗಳು ಸೇರಿ ಒಟ್ಟು 6 ಕ್ಯಾಂಟೀನ್ ಇದ್ದು, ಅವು ಬಂದ್ ಆಗಿವೆ.

ಸಾಮಾನ್ಯ ದಿನಗಳಲ್ಲಿ ಪ್ರತಿಯೊಂದು ಕ್ಯಾಂಟೀನ್‌ನಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಸೇರಿದಂತೆ ದಿನಕ್ಕೆ 500 ಕೂಪನ್ ವಿತರಣೆ ಮಾಡಲಾಗುತ್ತಿದೆ. ಆದರೆ, ಲಾಕ್‌ಡೌನ್‌ನಲ್ಲಿ ಗ್ರಾಹಕರು ಕ್ಯಾಂಟೀನ್‌ಗಳಿಗೆ ಬಂದರೆ ಅಲ್ಲಿ ಆಹಾರವಿಲ್ಲದ್ದರಿಂದ ವಾಪಸ್ ಹೋಗುವಂತಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನ ನೀಡುವುದಾಗಿ ಹೇಳುತ್ತಿದ್ದು, ವಾಸ್ತವದಲ್ಲಿ ನೀಡುತ್ತಿಲ್ಲ ಎಂದು ವಾಹನ ಚಾಲಕರು, ಕಾರ್ಮಿಕರು ದೂರಿದ್ದಾರೆ.

57 ರೂ. ದರ ನಿಗದಿ: ಸರ್ಕಾರವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಒಬ್ಬ ವ್ಯಕ್ತಿಯ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸೇರಿ 57 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು 25 ರೂ. ನೀಡಿದರೆ ಉಳಿದ 32 ರೂ. ಮಹಾನಗರ ಪಾಲಿಕೆ ಪಾವತಿಸುತ್ತಿದೆ. ಪಾಲಿಕೆಯಿಂದ ಶೇ. 70ರಷ್ಟು, ಕಾರ್ಮಿಕ ಇಲಾಖೆ ಶೇ. 30ರಷ್ಟು ಹಣ ಖರ್ಚು ಮಾಡುತ್ತಿವೆ.

ಲಾಕ್‌ಡೌನ್ ಸಡಿಲಿಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಒಂದು ವೇಳೆ ನೆಪವೊಡ್ಡಿ ಕ್ಯಾಂಟೀನ್ ಬಂದ್ ಮಾಡಿದರೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು. ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆಸ್ಪತ್ರೆ ಆವರಣ, ಕಣಬರ್ಗಿ ರಸ್ತೆಯಲ್ಲಿರುವ ಕ್ಯಾಂಟೀನ್‌ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. |ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ